ಬೆಳಗಾವಿಯಲ್ಲಿ ಫೆ.8 ರಿಂದ ಕರ್ನಾಟಕ ಕುಸ್ತಿ ಹಬ್ಬ: ಸಚಿವ ಸತೀಶ್ ಜಾರಕಿಹೊಳಿ

Update: 2019-01-05 15:49 GMT

ಬೆಳಗಾವಿ, ಜ.5: ಪ್ರಸಕ್ತ ಸಾಲಿನ ಪ್ರಥಮ ಕರ್ನಾಟಕ ಕುಸ್ತಿ ಹಬ್ಬ ಫೆಬ್ರವರಿ 8, 9 ಹಾಗೂ 10 ರಂದು ಮೂರು ದಿನಗಳ ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಕುಸ್ತಿ ಹಬ್ಬ ಏರ್ಪಡಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಸ್ತಿ ಹಬ್ಬ ಏರ್ಪಡಿಸಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಎರಡು ಕೋಟಿ ರೂ.ಅನುದಾನ ನಿಗದಿಪಡಿಸಲಾಗಿದ್ದು, ಈಗಾಗಲೇ ಒಂದು ಕೋಟಿ ರೂ.ಬಿಡುಗಡೆಯಾಗಿದೆ. ಈ ಅನುದಾನವನ್ನು ಬಳಸಿಕೊಂಡು ಕುಸ್ತಿ ಹಬ್ಬವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಅಂತರ್‌ರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳನ್ನು ಆಹ್ವಾನಿಸಿ, ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ರಾಜ್ಯದ ಕುಸ್ತಿ ಪಟುಗಳಿಗೆ ಕಲಿಯುವ ಅವಕಾಶಗಳನ್ನು ಒದಗಿಸಬೇಕು. ಕುಸ್ತಿ ಹಬ್ಬದಲ್ಲಿ ಸ್ಥಳೀಯ ಕುಸ್ತಿಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರಾಜ್ಯಾದ್ಯಂತ ಸೂಕ್ತ ಪ್ರಚಾರ ಕೈಗೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಕರ್ನಾಟಕ ಕುಸ್ತಿ ಹಬ್ಬ ಆಯೋಜನೆಗೆ ಸಮಯಾವಕಾಶ ಕಡಿಮೆ ಇರುವುದರಿಂದ ಸ್ವಾಗತ, ಪ್ರಚಾರ ಸೇರಿದಂತೆ ಎಲ್ಲ ಬಗೆಯ ಸಮಿತಿಗಳನ್ನು ಕೂಡಲೇ ರಚಿಸಿ ಕಾರ್ಯಾರಂಭಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಭಯ್ ಪಾಟೀಲ್, ಅನಿಲ್ ಬೆನಕೆ, ಮೇಯರ್ ಬಸಪ್ಪಚಿಕ್ಕಲದಿನ್ನಿ, ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಜಿ.ಪಂ.ಸಿಇಓ ರಾಮಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News