ಕಾನೂನುಗಳಿದ್ದರೂ ಮಹಿಳಾ ದೌರ್ಜನ್ಯಗಳು ಕಡಿಮೆಯಾಗಿಲ್ಲ: ಶಶಿಕಲಾ ವಸ್ತ್ರದ
ಧಾರವಾಡ, ಜ.5: ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಸಲುವಾಗಿ ಹಲವು ಕಾನೂನುಗಳಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ ಎಂದು ಮಹಿಳಾ ಸಂವೇದನೆ ಕಾರ್ಯಕ್ರಮದ ಅಧ್ಯಕ್ಷೆ ಶಶಿಕಲಾ ವಸ್ತ್ರದ ಅಭಿಪ್ರಾಯಪಟ್ಟರು.
ಇಲ್ಲಿನ ಪ್ರಧಾನ ವೇದಿಕೆಯಲ್ಲಿ ನಡೆದ ಮಹಿಳಾ ಸಂವೇದನೆ ಕುರಿತ ವಿಚಾರಗೋಷ್ಠಿಯಲ್ಲಿ ಮಹಿಳಾ ಆತ್ಮಕಥನಗಳು ವಿಷಯದ ಬಗ್ಗೆ ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆಯರ ದೌರ್ಜನ್ಯಕ್ಕೆ ಸೂಕ್ತವ ಕಾನೂನು ರಚಿಸಿದ್ದರೂ ದೌರ್ಜನ್ಯದ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಹೆಣ್ಣು ಕುಟುಂಬದಿಂದ ಹೊರಬಂದರೆ ಆಕೆ ಒಬ್ಬಳೇ ಅನೇಕ ಸವಾಲು ಮತ್ತು ಜವಾಬ್ದಾರಿಗಳನ್ನು ಎದುರಿಸಬೇಕಾಗುತ್ತದೆ. ಇದರ ಜೊತೆಗೆ ಹೆಣ್ಣು ಮಕ್ಕಳ ಆತ್ಮಕಥೆಗೆ ಮೆಚ್ಚುಗೆ ಇದೆ. ಅಂತೆಯೇ ಮೂಗು ಮುರಿಯುವವರ ಸಂಖ್ಯೆ ಇನ್ನೂ ಹೆಚ್ಚಿದೆ. ದೌರ್ಜನ್ಯದ ವಿರುದ್ಧ ಕಾನೂನು ರಚನೆಯಾಗಿದ್ದರೂ ದೌರ್ಜನ್ಯದ ಸಂಖ್ಯೆ ಕಡಿಮೆಯಾಗಿಲ್ಲ. ಹೆಣ್ಣು ಮಕ್ಕಳನ್ನು ಅನುಕಂಪದ ದೃಷ್ಟಿಯಲ್ಲಿ ಯಾಕೆ ನೋಡುತ್ತಿಲ್ಲ ಎಂಬುದನ್ನು ಆತ್ಮಕಥೆಗಳು ಬಿಂಬಿಸುತ್ತವೆ. ಮಹಿಳೆಯರಿಗೆ ಸಾಂತ್ವ ನ ಹೇಳುವ ಪರಿಸರ ರಾಜ್ಯದಲ್ಲಿ ನಿರ್ಮಿಸಬೇಕಿದೆ ಎಂದರು.
ಮಹಿಳೆ ಮತ್ತು ಕಾನೂನು ವಿಷಯದ ಬಗ್ಗೆ ಮಾತನಾಡಿದ ಐಪಿಎಸ್ ಅಧಿಕಾರಿ ಡಿ.ರೂಪಾ, ಮಹಿಳೆಯರು ತಮಗಾದ ಶೋಷಣೆಯನ್ನು ಬಚ್ಚಿಟ್ಟುಕೊಳ್ಳದೇ, ದೂರು ನೀಡುವ ಮನಸ್ಸು ಮಾಡಬೇಕು ಆಗ ಕಾನೂನು ಸಫಲವಾಗಿ, ಸದೃಢವಾಗುತ್ತದೆ. ದೇಶದ ಸಂವಿಧಾನ ಸಮಾನತೆಯನ್ನು ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.
ಇಂದಿಗೂ ಮಹಿಳೆಗೆ ಸಮಾನತೆ ದೊರೆಯದಿರುವುದು ವಿಪರ್ಯಾಸ. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿಮಹಿಳೆಯರು ಮನೆಯಲ್ಲೇ ಗೃಹ ಕೈಗಾರಿಕೆ ನಡೆಸುತ್ತಿದ್ದರು. ಅನೇಕರು ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದರು. ಕ್ರಾಂತಿಯ ಸಮಯದಲ್ಲಿ ಉದ್ಯೋಗ ನಿಂತು ಹೋಗಿ ಮಹಿಳೆಯರ ಆರ್ಥಿಕ ಪ್ರಬಲತೆ ಕುಗ್ಗಿತು. ಕಳೆದ ಶತಮಾನಕ್ಕೆ ಹೋಲಿಸಿದರೆ ಈಗ ಶಿಕ್ಷಿತ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ ತಾವು ಕೆಲಸ ಮಾಡುವ, ಪ್ರಯಾಣ ಮಾಡುವ ಸ್ಥಳಗಳಲ್ಲಿ ಆಗುವ ದೌರ್ಜನ್ಯಕ್ಕೆ ಸುರಕ್ಷತೆ ಇನ್ನೂ ದೊರಕಿಲ್ಲ ಎಂದು ತಿಳಿಸಿದರು.
ರಾಜಕಾರಣ ಮತ್ತು ಮಹಿಳಾ ಪ್ರಾತಿನಿಧ್ಯ ವಿಷಯದ ಬಗ್ಗೆ ಡಾ.ಕವಿತಾ ರೈ ಮಾತನಾಡಿ, ದೇಶ ಸ್ವಾತಂತ್ರ್ಯ ಪಡೆಯುವ ವಿಚಾರದಲ್ಲಿ ಮಹಿಳೆಯರ ಪಾತ್ರ ಅಗಾಧವಾದುದು. 1992ರ ನಂತರ ರಾಜಕಾರಣದಲ್ಲಿ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‍ಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಸಂವಿಧಾನ ಸಮಿತಿ ರಚನೆಯಾದಾಗಲೇ 14 ಜನ ಮಹಿಳಾ ಪ್ರತಿನಿಧಿಗಳಿದ್ದರು. ಇವರೆಲ್ಲ ಶಕ್ತರಾಗಿ ಒಳನೋಟ ಹೊಂದಿದ್ದರು. ಮಹಿಳೆಯರ ಆಡಳಿತದಲ್ಲಿ ನಿರ್ದಿಷ್ಟ ಯೋಜನೆಗಳಿರುತ್ತದೆ. ಆದರೆ ತಂತ್ರಗಾರಿಕೆ ಮೂಲಕ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವುದನ್ನು ಕಾಣಬಹುದಾಗಿದೆ ಎಂದರು.