×
Ad

ಆರ್ ಟಿಇನಿದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಕುತ್ತು: ನಾಗರತ್ನ ಬಂಜಗೆರೆ

Update: 2019-01-05 21:29 IST

ಧಾರವಾಡ, ಜ.5: ಶಿಕ್ಷಣ ಹಕ್ಕು ಕಾಯ್ದೆ(ಆರ್‍ಟಿಇ)ಯಿಂದಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿದೆ ಎಂದು ಸಮಾನ ಶಿಕ್ಷಣಕ್ಕಾಗಿ ಜನಾಂದೋಲದ ಸದಸ್ಯೆ ನಾಗರತ್ನ ಬಂಜಗೆರೆ ಹೇಳಿದ್ದಾರೆ.

ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ ಎರಡನೇ ದಿನ ನಡೆದ ಕನ್ನಡ ಶಾಲೆಗಳ ಅಳಿವು-ಉಳಿವು ಎಂಬ ಗೋಷ್ಠಿಯಲ್ಲಿ ಸರಕಾರಿ ಶಾಲೆಗಳು ಮತ್ತು ಆರ್‍ಟಿಇ ಪ್ರಯೋಜನ ಎಂಬ ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.

ಶಿಕ್ಷಣ ಮೂಲಭೂತ ಹಕ್ಕಾಗಬೇಕು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ಮಾನವೀಯ ಮೌಲ್ಯಗಳುಳ್ಳ ಶಿಕ್ಷಣ ಎಲ್ಲರಿಗೂ ಬೇಕು ಎಂಬ ಉದ್ದೇಶದಿಂದಾಗಿ ಆರ್‍ಟಿಇ ಜಾರಿ ಮಾಡಲಾಗಿದೆ. ಆದರೆ, ಇದರಿಂದಾಗಿ, ಶೇ.25 ರಷ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಹಿಸಲಾಗುತ್ತಿದೆ. ಸರಕಾರಿ ಶಾಲೆಗಳಿಗೆ ದಾಖಲಾಗಬೇಕಾದ ಮಕ್ಕಳು ಖಾಸಗಿ ಶಾಲೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ಖಾಸಗಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದೇವೆ. ಅಲ್ಲದೆ, ಇಂದು ಅದು ಬಹುಚರ್ಚಿತ ವಿಷಯವೂ ಆಗಿದೆ. ಗುಣಾತ್ಮಕ ಶಿಕ್ಷಣ ರೂಪಿಸುವಲ್ಲಿ ಸರಕಾರಿ ಶಾಲೆಗಳದ್ದು ಪ್ರಮುಖ ಪಾತ್ರವಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸೃಷ್ಠಿಸಿರುವ ಭ್ರಮೆಯಿಂದ ಹೊರಬರಲು ಯಾರೂ ತಯಾರಿಲ್ಲ. ಇನ್ನುಳಿದಂತೆ ಆರ್‍ಟಿಇ ಕಾಯ್ದೆಯ ಅಡಿಯಲ್ಲಿ ಬಡ ಮಕ್ಕಳಿಗೆ ಸಿಗಬೇಕಾದ ಸಂಪೂರ್ಣ ಶಿಕ್ಷಣವೂ ಸಿಕ್ಕಿಲ್ಲ. ಅದನ್ನೂ ಶ್ರೀಮಂತರ, ಸರಕಾರಿ ನೌಕರರ ಮಕ್ಕಳೇ ಕಸಿದುಕೊಳ್ಳಲಾರಂಭಿಸಿರುವುದು ದುರಂತ ಎಂದರು.

ಶಿಕ್ಷಣ ಕಾಯ್ದೆ ಜಾರಿಯಾದ 7-8 ವರ್ಷಗಳ ಅವಧಿಯಲ್ಲಿ ಸಾವಿರ ಸಂಖ್ಯೆಯಲ್ಲಿ ಸರಕಾರಿ ಶಾಲೆಗಳು ಮುಚ್ಚಿದ್ದು, ಅದೇ ಪ್ರಮಾಣದಲ್ಲಿ ಖಾಸಗಿ ಶಾಲೆಗಳು ತಲೆ ಎತ್ತಿವೆ. ಅಲ್ಲದೆ, ಆರ್‍ಟಿಇ ಹಾಗೂ ನೇರವಾಗಿ ದಾಖಲಾದ ಮಕ್ಕಳು ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕಗಳನ್ನು ಭರಿಸಲು ಸಾಧ್ಯವಾಗದೇ ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿರುವವರ ಸಂಖ್ಯೆ ಶೇ.99.3 ರಷ್ಟಿದೆ. ಹೀಗಿದ್ದರೂ ಸರಕಾರ ನಾವು ಶಾಲೆಗಳನ್ನು ಮುಚ್ಚಲ್ಲ ಎಂದು ಹೇಳುತ್ತದೆ. ಒಳಗಡೆ ವ್ಯವಸ್ಥಿತವಾಗಿ ಶಾಲೆಗಳಿಗೆ ಬೀಗ ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತು ಮಾತನಾಡಿದ ಅಬ್ದುಲ್ ರೆಹಮಾನ್ ಪಾಷ, ಸರಕಾರಿ ಶಾಲೆಗಳಲ್ಲಿ ಕನ್ನಡ ಮಾತೃಭಾಷೆಯಾಗಿದ್ದರೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಇಂಗ್ಲೀಷ್ ಅನ್ನು ಮಾಧ್ಯಮವನ್ನಾಗಿ ಮಾಡುವುದರಿಂದ ಕನ್ನಡ ಅಥವಾ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲ್ಲ. ಮಗು ಶಾಲೆಗೆ ಬರುವ ವೇಳೆ ಪ್ರೌಢಿಮೆ ಬಂದಿರುತ್ತದೆ. ಅಲ್ಲದೆ, ಶಾಲಾ ಪೂರ್ವಕ ಶಿಕ್ಷಣವೂ ಕನ್ನಡದಲ್ಲಿರುತ್ತದೆ. ಇದರಿಂದಾಗಿ ಕನ್ನಡ ಶಾಲೆಗಳೇ ಮಕ್ಕಳಿಗೆ ಹೆಚ್ಚು ಇಷ್ಟ ಆಗುತ್ತವೆ. ಆದರೆ, ಇಂಗ್ಲೀಷ್ ಭಾಷೆ ಶಾಲೆಗಳು ಮಕ್ಕಳ ಮನೋಜ್ಞಾನದ ಭಾಷೆಯನ್ನು ನಿರ್ಲಕ್ಷ್ಯಿಸುತ್ತಿವೆ ಎಂದರು.

ಪ್ರಾಥಮಿಕ ಶಾಲೆಯಲ್ಲಿ ಮಾತೃಭಾಷೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ. ಇದಕ್ಕೆ ನನ್ನ ವಿರೋಧವಿದೆ. ಮಾತೃಭಾಷೆ ಎಂದಾಗ ಹಲವು ಭಾಷೆಗಳು ಸ್ಥಳೀಯವಾಗಿ ಬರುತ್ತವೆ. ಕೆಲವು ಜಾತಿ ಮತ್ತು ಧರ್ಮಗಳಲ್ಲಿನ ಸ್ಥಾಪಿತ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕು ಎಂಬ ಒತ್ತಾಯ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ನಾನು ಇದನ್ನು ಒಪ್ಪಲ್ಲ ಎಂದು ಅವರು ನುಡಿದರು.

ಕನ್ನಡ ಮಾಧ್ಯಮದಲ್ಲಿ ನರ್ಸರಿ ಶಾಲೆಗಳನ್ನು ಆರಂಭ ಮಾಡಲು ಸಮುದಾಯ ಮುಂದಾಗಬೇಕು. ಅಲ್ಲದೆ, ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಯಾವ ಉದ್ದೇಶದಿಂದ ಕಳುಹಿಸಲಾಗುತ್ತಿದೆ ಎಂಬುದರ ಕುರಿತು ಸಮೀಕ್ಷೆ ನಡೆಯಬೇಕು ಎಂದು ಅವರು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳು ಕುರಿತು ಸಿದ್ಧರಾಮ ಮನಹಳ್ಳಿ ಮಾತನಾಡಿದರು ಹಾಗೂ ಪ್ರೊ.ಜಿ.ಎಸ್.ಜಯದೇವ್ ಅಧ್ಯಕ್ಷತೆ ವಹಿಸಿದ್ದರು.

ಮಾತೃಭಾಷೆ ಉರ್ದುವಾದರೂ ಕನ್ನದ ಮಾಧ್ಯಮ ಶಾಲೆಯಲ್ಲಿ ಓದಿದೆ. ಅದೇ ರೀತಿ, ಮಕ್ಕಳನ್ನು ಸಹ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಓದಿಸಿದೆ. ನಾನು ಇಚ್ಛಿಸಿದರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಓದಿಸಬಹುದಾಗಿತ್ತು. ಆದರೆ, ಕನ್ನಡ ಮಾಧ್ಯಮದ ಶಿಕ್ಷಣವೇ ಉತ್ತಮ ಆಯ್ಕೆ ಎನ್ನುವುದು ನನ್ನ ಅರಿವಿನಲ್ಲಿತ್ತು. ಪ್ರತಿ ಪೋಷಕರು ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾತೃ ಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪೋಷಕರ ಮನವೊಲಿಸಬೇಕಾಗಿದೆ.

-ಅಬ್ದುಲ್ ರೆಹಮಾನ್ ಪಾಷ

ಗೋಷ್ಠಿಗೆ ಜನರ ನಿರಾಸಕ್ತಿ

ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ಜನರ ನಿರಾಸಕ್ತಿ ಕಂಡು ಬಂದಿತು. ಮುಖ್ಯ ವೇದಿಕೆಯ ಗೋಷ್ಠೀಯಲ್ಲಿ ಜನರು ಇದ್ದರಾದರೂ ಉಳಿದ ವೇದಿಕೆಯಲ್ಲಿ ಸಭಿಕರ ಕೊರತೆ ಎದುರಾಯಿತು. ಕೃಷಿ ವಿವಿ ಆವರಣದ ಪ್ರಧಾನ ವೇದಿಕೆಯಲ್ಲಿ ನಡೆದ ಮೊದಲ ಗೋಷ್ಠಿಯಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು. ಸಾವಿರಾರು ಜನರು ಕುಳಿತುಕೊಳ್ಳಬೇಕಾದ ಕುರ್ಚಿಗಳು ಬಹುತೇಕ ಖಾಲಿ-ಖಾಲಿ ಆಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News