ಶೈವ-ವೈಷ್ಣವರ ದ್ವೇಷದಿಂದ ವಿಜಯನಗರ ಸಾಮ್ರಾಜ್ಯ ಹಾಳಾಯಿತು: ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ
ಧಾರವಾಡ, ಡಿ.5: ಹಂಪಿಯ ವಿಜಯನಗರ ಸಾಮ್ರಾಜ್ಯ ಹಾಳಾಗಿದ್ದು, ಶೈವ-ವೈಷ್ಣವರ ದ್ವೇಷದಿಂದಲೆ ಹೊರತು ಮುಸ್ಲಿಮರಿಂದಲ್ಲ ಎಂದು ಹಿರಿಯ ಇತಿಹಾಸಕಾರ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ವಿಶ್ಲೇಷಿಸಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಇತಿಹಾಸ: ನೂತನ ಒಳನೋಟಗಳು’ ಕುರಿತ ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮುಸ್ಲಿಮರ ಆಕ್ರಮಣದಿಂದ ವಿಜಯನಗರ ಸಾಮ್ರಾಜ್ಯ ಹಾಳಾಯಿತು ಎಂಬುದು ಸುಳ್ಳು ಹೇಳಿಕೆಗಳಾಗಿವೆ. ನಮಗೆ ಸಿಕ್ಕಿರುವ ಲಿಖಿತ ಗ್ರಂಥಗಳ ಪ್ರಕಾರ ಶೈವ-ವೈಷ್ಣವರ ನಡುವೆ ಇದ್ದ ದ್ವೇಷವೆ ವಿಜಯನಗರ ಹಾಳಾಗಲು ಮುಖ್ಯ ಕಾರಣ ಎಂದು ಖಚಿತ ಪಡಿಸಿದರು.
ಕ್ರಿ.ಶ.1347ರಿಂದ 1947ರವರೆಗೆ ಸುಮಾರು 600ವರ್ಷಗಳವರೆಗೆ ಮುಸ್ಲಿಮರು ಕರ್ನಾಟಕದ ಬಹು ಭಾಗವನ್ನು ಆಳಿದ್ದಾರೆ. ಅದಕ್ಕೂ ಮೊದಲೆ ಖಿಲ್ಜಿಗಳು, ತುಘಲಕ್ ಮನೆತನಗಳು ಇಲ್ಲಿಗೆ ಬಂದು ಹೋಗಿದ್ದಾರೆ. ಅವರೆಲ್ಲರು ತಮ್ಮ ಕಾರ್ಯಗಳನ್ನು ಶಾಸನ ರೂಪದಲ್ಲಿ ಇಲ್ಲಿಯೆ ಬಿಟ್ಟು ಹೋಗಿದ್ದಾರೆ. ಈ ದೃಷ್ಟಿಯಿಂದ ಪ್ರಸ್ತುತ ಶಾಸನಸೂಚಿ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರಿಂದ ನಡೆದ ಹೋದ ಅನೇಕ ಘಟನೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಕರ್ನಾಟಕದಲ್ಲಿ ಮೊಟ್ಟ ಮೊದಲಿನ ಪರ್ಶಿಯನ್ ಶಾಸನವನ್ನು ಚಿಕ್ಕಮಗಳೂರು ಜಿಲ್ಲೆಯ ಬುಡನಗಿರಿಯದೆಂದು ಹೇಳಲಾಗುತ್ತದೆ. ಅದು ಕ್ರಿ.ಶ.1005-06ದೆಂಂದು ಗುರುತಿಸಲಾಗಿದೆ. ವಿಶೇಷವೆಂದರೆ ಆ ದಿನಗಳಲ್ಲಿ ಮುಸ್ಲಿಮರು ದಕ್ಷಿಣ ಭಾರತದಲ್ಲಿ ಇನ್ನೂ ಪ್ರವೇಶಿಸಿ ರಾಜ್ಯಭಾರ ಮಾಡುತ್ತಿರಲಿಲ್ಲ. ಕರ್ನಾಟಕದಲ್ಲಿ ಒಟ್ಟು ಸುಮಾರು 800ರಷ್ಟು ಶಾಸನಗಳನ್ನು ಪರ್ಶಿಯನ್, ಅರೇಬಿಕ್ ಉರ್ದು ಭಾಷೆಗಳಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಇತಿಹಾಸಕಾರರಾದ ಡಾ.ಲಕ್ಷ್ಮಣ್ ತೆಲಗಾವಿ, ಡಾ.ಎಸ್.ಚಂದ್ರಶೇಖರ, ಡಾ.ಶೀಲಾಕಾಂತ ಪತ್ತಾರ ವಿಷಯಗಳನ್ನು ಮಂಡಿಸಿದರು. ಡಾ.ಸಿ.ನಾಗರಾಜ ಸ್ವಾಗತಿಸಿ, ಡಾ.ದಾಕ್ಷಾಯಿಣಿ ಉಡಿಕೇರಿ ನಿರೂಪಿಸಿದರು.