ಮಧ್ಯಾಹ್ನದ ಬಿಸಿಯೂಟ, ಇಂದಿರಾ ಕ್ಯಾಂಟೀನ್‍ನಲ್ಲಿ ಒಂದು ದಿನ ಸಿರಿಧಾನ್ಯ ನೀಡಲು ಚಿಂತನೆ: ಡಿಸಿಎಂ ಪರಮೇಶ್ವರ್

Update: 2019-01-05 17:00 GMT

ತುಮಕೂರು,ಜ.5: ಮಧ್ಯಾಹ್ನದ ಬಿಸಿಯೂಟ ಹಾಗೂ ಇಂದಿರಾ ಕ್ಯಾಂಟೀನ್‍ಗಳಲ್ಲಿ ವಾರದಲ್ಲಿ ಒಂದು ದಿನ ಸಿರಿಧಾನ್ಯಗಳ ಆಹಾರ ಪದಾರ್ಥ ವಿತರಿಸಲು ಸರಕಾರದ ಹಂತದಲ್ಲಿ ಪರಿಶೀಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.  

ತುಮಕೂರು ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಮಟ್ಟದ ಸಾವಯವ ಹಾಗೂ ಸಿರಿಧಾನ್ಯಗಳ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರಂತರ ಬರಗಾಲ ಕಾಡುತ್ತಿದ್ದು, ಒಣ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುವ ಸಿರಿಧಾನ್ಯಗಳನ್ನು ರೈತರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಸಿಗುತ್ತಿಲ್ಲ. ಹೀಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 50 ರಿಂದ 60ಲಕ್ಷ ಮಕ್ಕಳು ಸೌಲಭ್ಯ ಪಡೆಯುತ್ತಿದ್ದು, ವಾರದಲ್ಲಿ ಒಂದು ದಿನ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯದ ಆಹಾರ ಪದಾರ್ಥ ವಿತರಣೆ ಹಾಗೂ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ವಾರದಲ್ಲಿ ಒಂದು ದಿನ ಸಿರಿಧಾನ್ಯಗಳ ಆಹಾರ ಪದಾರ್ಥವನ್ನು ವಿತರಿಸಿದರೆ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ರೈತರಿಗೆ ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡಿದಂತಾಗುತ್ತದೆ ಎಂದರು. 

ಈ ಸಂಬಂಧ ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಕಾರ್ಯಕ್ರಮದ ಅನುಷ್ಟಾನಕ್ಕೆ ಪ್ರಯತ್ನಿಸಲಾಗುವುದು. ನವಣೆ, ಸಜ್ಜೆ, ಹಾರಕ, ಬರುಗು ಸೇರಿದಂತೆ ಸಿರಿಧಾನ್ಯಗಳು ನಿರ್ಲಕ್ಷ್ಯಕ್ಕೆ ಒಳಗಾದ ಬೆಳೆಗಳು ಆಗಿದ್ದವು. ಇದೀಗ ಇವುಗಳ ಬಳಕೆಯಿಂದ ಆರೋಗ್ಯ ವೃದ್ಧಿಯಾಗಲಿದೆ ಎಂಬುದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ ನಮ್ಮ ಮತ್ತು ಮುಂದಿನ ಪೀಳಿಗೆಯ ಆರೋಗ್ಯ ಉತ್ತಮವಾಗಲಿದೆ ಎಂದು ಅವರು ತಿಳಿಸಿದರು. 

ನಿರಂತರ ಬರಗಾಲ ಹಾಗೂ ಸಾಲದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾಲ ಮನ್ನಾ ಸೇರಿದಂತೆ ರೈತರ ರಕ್ಷಣೆಗೆ ಎಲ್ಲಾ ರೀತಿಯ ಸಹಾಯ ಹಸ್ತವನ್ನು ಸರಕಾರ ನೀಡುತ್ತಿದೆ. 45ಸಾವಿರ ಕೋಟಿ ರೂ.ಗೂ ಹೆಚ್ಚು ರೈತರ ಸಾಲವನ್ನು ಮನ್ನಾ ಮಾಡಿದ್ದು, ರೈತರಿಗೆ ಋಣಮುಕ್ತ ಪತ್ರ ನೀಡುತ್ತಿದ್ದೇವೆ ಎಂದ ಅವರು, ಹಸಿರು ಕ್ರಾಂತಿಯಿಂದಾಗಿ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, ಕಳೆದ 30-40 ವರ್ಷಗಳಿಂದ ಹೆಚ್ಚು ರಾಸಾಯನಿಕ ವಸ್ತು ಬಳಕೆ ಮಾಡಿದ್ದರಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಂಡಿದೆ. ಇದಕ್ಕಾಗಿ ರಾಜ್ಯ ಸರಕಾರ ಸಾವಯವ ಕೃಷಿ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ತಿಳಿಸಿದರು. 

ಕಾರ್ಮಿಕ ಸಚಿವ ವೆಂಕಟರಮಣಪ್ಪ  ಮಾತನಾಡಿ, ಒಂದು ಕಾಲದಲ್ಲಿ ಬಡವರ ಧಾನ್ಯಗಳಾಗಿದ್ದ ಸಜ್ಜೆ, ನವಣೆ ಇದೀಗ ಶ್ರೀಮಂತರು ಬಳಕೆ ಮಾಡುವ ಧಾನ್ಯಗಳು ಆಗಿವೆ. ಈ ಸಿರಿಧಾನ್ಯಗಳಿಗೆ ರೈತರೇ ಬೆಲೆ ನಿರ್ಧರಿಸುವಂತೆ ಆಗಬೇಕು. ಕೈಗಾರಿಕೆಗಳಲ್ಲಿ ತಯಾರಾಗುವ ವಸ್ತುಗಳಿಗೆ ಕೈಗಾರಿಕೆಯ ಮಾಲೀಕರೇ ದರ ನಿಗದಿ ಮಾಡುವಾಗ ರೈತರು ಬೆಳೆದ ಬೆಳೆಗಳಿಗೆ ರೈತರೇ ದರ ನಿಗದಿಪಡಿಸುವ ಅಧಿಕಾರವನ್ನು ನೀಡಬೇಕಾಗಿದೆ ಎಂದು ತಿಳಿಸಿದರು.  

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಎಲ್ಲೆಡೆಯೂ ಸಿರಿಧಾನ್ಯಗಳದ್ದೇ ಮಾತಾಗಿದೆ. ಬಡವರು ಬೆಳೆದ ಈ ಸಿರಿಧಾನ್ಯಗಳು ಶ್ರೀಮಂತರ ಆಹಾರ ಪದಾರ್ಥಗಳು ಆಗಿವೆ. ನಗರ ಪ್ರದೇಶ ಹಾಗೂ ಸ್ಟಾರ್ ಹೋಟೆಲ್‍ಗಳಲ್ಲೂ ಈ ಪದಾರ್ಥಗಳಿಗೆ ಬೇಡಿಕೆ ಇದೆ. ಒಣ ಪ್ರದೇಶದಲ್ಲಿ ಬೆಳೆಯುವ ಸಿರಿಧಾನ್ಯಗಳಿಗೆ ಮಾರುಕಟ್ಟೆ ಹಾಗೂ ಸಂಸ್ಕರಣೆ ಸೌಲಭ್ಯ ಒದಗಿಸಬೇಕಾಗಿದೆ ಎಂದು ತಿಳಿಸಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಿರಿಧಾನ್ಯಗಳು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿಸುತ್ತವೆ. ರೈತರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಶಾಶ್ವತ ಮಳಿಗೆಗಳನ್ನು ನಿರ್ಮಿಸಿ ವಾರಕ್ಕೊಮ್ಮೆ ಸಂತೆ ಮಾಡಲು ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಸಿಇಓ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ವಿ.ಗೋಪಿನಾಥ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋವಿಂದರಾಜು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎನ್. ಲೋಕೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News