ನರ್ಸಿಂಗ್ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ: ಆರೋಪ

Update: 2019-01-05 17:29 GMT

ಚಿಕ್ಕಮಗಳೂರು, ಜ.5: ರಾಜ್ಯ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳಿಗೆ ಉಚಿತ ನರ್ಸಿಂಗ್ ತರಬೇತಿ ಕೋರ್ಸ್ ಆಯ್ಕೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಇಲಾಖೆ ಕೋರ್ಸ್‍ಗೆ ನರ್ಸಿಂಗ್ ಕಾಲೇಜುಗಳಿಗೆ ಸೇರ್ಪಡೆಯಾಗುತ್ತಿರುವ ಅಭ್ಯರ್ಥಿಗಳಿಂದ ಸರಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆಯಲಾಗುತ್ತಿದೆ ಎಂದು ಆದಿವಾಸಿ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ರಾಜೇಶ್ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಲಾಖೆ ವತಿಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ನರ್ಸಿಂಗ್ ಕೋಸ್ ನೀಡಲು ಸರ್ಕಾರ ನಿಗದಿಪಡಿಸಿದಂತೆ ಶುಲ್ಕ ನೀಡಲಾಗುತ್ತಿದ್ದರೂ ಚಿಕ್ಕಮಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವೇಶ ನೀಡಲು ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ವಗೈರೆ ಸೌಲಭ್ಯಗಳನ್ನು ನೀಡಲು ಹೆಚ್ಚುವರಿಯಾಗಿ 10 ಸಾವಿರ ರೂ.ಗಳ ಬೇಡಿಕೆ ಇಡುತ್ತಿದ್ದು, ಇದಕ್ಕೆ ಯಾವುದೇ ರಸೀದಿ ನೀಡದೆ ಪಡೆಯುತ್ತಿದ್ದಾರೆ. ಇದರಿಂದ ಬಡವರ್ಗದಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಖಾಸಗಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಗಳ ಈ ಬೇಡಿಕೆಯಿಂದ ಹೆಚ್ಚುವರಿ ಶುಲ್ಕವನ್ನು ಭರಿಸಲು ಪರದಾಡುವಂತಾಗಿದೆ.

ಸರ್ಕಾರವೇ ಉಚಿತವಾಗಿ ನರ್ಸಿಂಗ್ ಕೋರ್ಸ್ ನೀಡಲು ಯೋಜನೆ ರೂಪಿಸಿ ಸಮವಸ್ತ್ರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲು ಶುಲ್ಕ ನಿಗದಿಮಾಡಿ ಸರ್ಕಾರವೇ ಭರಿಸುತ್ತಿದ್ದರೂ ಖಾಸಗಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಗಳು ಅನಧಿಕೃತವಾಗಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಖಂಡನೀಯ ಎಂದಿದ್ದಾರೆ.

ಈ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ನೀಡಿದ ದೂರನ್ನಾಧರಿಸಿ ನೂತನವಾಗಿ ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳಿಂದ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಮೊತ್ತದ ಶುಲ್ಕವನ್ನು ಪಡೆಯದಂತೆ ಈಗಾಗಲೆ ಸಂಬಂಧಪಟ್ಟ ಖಾಸಗಿ ನರ್ಸಿಂಗ್ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದು, ಹೊರಡಿಸಿರುವ ಸುತ್ತೋಲೆಯನ್ನು ಆಯಾ ಕಾಲೇಜುಗಳ ಪ್ರಕಟನಾ ಫಲಕದಲ್ಲಿ ಪ್ರಕಟಿಸುವಂತೆ ಸೂಚಿಸಿದ್ದು, ಉಚಿತ ನರ್ಸಿಂಗ್ ತರಬೇತಿ ಯೋಜನೆಯಡಿ ಆಯ್ಕೆಯಾಗಿರುವ ಅಭ್ಯರ್ಥಿಗಳು ನರ್ಸಿಂಗ್ ಕಾಲೇಜುಗಳಿಗೆ ದಾಖಲಾಗುವ ಸಂದರ್ಭದಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದಂತೆ ರಾಜೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News