ಹನೂರು ವಿಷ ಪ್ರಸಾದ ದುರಂತ: ಮೃತರ ಕುಟುಂಬಸ್ಥರಿಗೆ ಜಿ.ಪಂ ನಿಂದ ಪರಿಹಾರ ವಿತರಣೆ

Update: 2019-01-05 17:43 GMT

ಹನೂರು,ಜ.5: ಸುಳ್ವಾಡಿ ವಿಷಪೂರಿತ ಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಚಾಮರಾಜನಗರ ಜಿ.ಪಂ ಸದಸ್ಯರ ವತಿಯಿಂದ ತಲಾ 10 ಸಾವಿರ ವೈಯಕ್ತಿಯ ಪರಿಹಾರ ನೀಡಲಾಯಿತು.

ಬಳಿಕ  ಜಿ.ಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ ಮಾತನಾಡಿ ಡಿ.14 ರಂದು ನಡೆದ ಪ್ರಕರಣದಲ್ಲಿ 120ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಗಳು ಪೂರಕವಾಗಿ ಸ್ಪಂದಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ಹೆಚ್ಚಿನ ಪ್ರಾಣಹಾನಿಯಾಗುವುದನ್ನು ತಪ್ಪಿಸಿದ್ದಾರೆ. ಆದರೂ ಕೂಡ ಘಟನೆಯಿಂದ 17 ಜನ ಮೃತಪಟ್ಟಿರುವುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಅವರ ಕುಟುಂಬಗಳಿಗೆ ನೆರವಾಗುವ ದೃಷ್ಠಿಯಿಂದ ಜಿ.ಪಂ ಸದಸ್ಯರೆಲ್ಲರೂ ವೈಯಕ್ತಿಕವಾಗಿ ದೇಣಿಗೆ ನೀಡಿದ್ದು, ಮೃತರ ಕುಟುಂಬಕ್ಕೆ ತಲಾ 10ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.

ನಂತರ ಜಿ.ಪಂ ಉಪಾಧ್ಯಕ್ಷ ಯೋಗೇಶ್ ಮಾತನಾಡಿ, ಕುಮಾರಸ್ವಾಮಿ ಅವರು ಬಿದರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಪೈಲಟ್ ಯೋಜನೆಯ ನೀಲನಕ್ಷೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ್ದರು. ಈ ಕಾರ್ಯವನ್ನು ಅತಿ ಶೀಘ್ರವಾಗಿ ಮುಗಿಸಿ ಸರ್ಕಾರಕ್ಕೆ ಕಳುಹಿಸಿಕೊಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು. ಅಲ್ಲದೆ ವಿಷಪ್ರಸಾದಕ್ಕೆ ಕಾರಣರಾದ ಆರೋಪಿಗಳಿಗೆ ಅತಿ ಶೀಘ್ರವಾಗಿ ಕಠಿಣ ಶಿಕ್ಷೆ ಆಗಲಿದೆ ಮತ್ತು ಆರೋಪಿಗಳ ಪರ ಯಾವ ವಕೀಲರೂ ಕೂಡ ವಕಾಲತ್ತು ವಹಿಸದೆ ಇರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದಕ್ಕೆ ವಕೀಲರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಬಸವರಾಜು, ಮರಗದಮಣಿ, ಕೆರೆಹಳ್ಳಿ ನವೀನ್, ಸದಾಶಿವಮೂರ್ತಿ, ಮಂಜುಳಾ ರಂಗಸ್ವಾಮಿ, ಚನ್ನಪ್ಪ, ಜಿ.ಪಂ ಸಿಇಓ ಹರೀಶ್ ಕುಮಾರ್, ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿಬಾಯಿ, ಪಿಡಿಓ ಶಿವಣ್ಣ, ಕಾರ್ಯದರ್ಶಿ ನಾಗರಾಜು ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News