ಮೈಸೂರು ಜಿಪಂ ಸಾಮಾನ್ಯ ಸಭೆ: ಖಾಸಗಿ ಆಸ್ಪತ್ರೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು

Update: 2019-01-05 17:59 GMT

ಮೈಸೂರು,ಜ.5: ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯ ಇಲ್ಲ. ಖಾಸಗಿ ಆಸ್ಪತ್ರೆಗಲ್ಲಿ ಕಡಿಮೆ ದರದ ಚಿಕಿತ್ಸೆ ಸಿಗುತ್ತಿಲ್ಲ. ಜಿಪಂ ಸಿಇಓ, ಡಿಎಚ್‍ಓ ಎಲ್ಲೂ ಪರಿಶೀಲನೆ ನಡೆಸುತ್ತಿಲ್ಲ ಎಂದು ಜಿ.ಪಂ. ಸದಸ್ಯರು ಆರೋಪಿಸಿದರು.

ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ಸುಲಿಗೆ ಮಾಡುತ್ತಿರುವುದರ ಕುರಿತು ಪ್ರಮುಖವಾಗಿ ಚರ್ಚೆನಡೆಯಿತು.

ಜಿಲ್ಲಾ ಪಂಚಾಯತ್  ಸಾಮಾನ್ಯ ಸಭೆಯನ್ನು ಕೋರಂ ಅಭಾವದಿಂದ ಅರ್ಧಗಂಟೆಗಳ ಕಾಲ ಮುಂದೂಡಲಾಗಿತ್ತು. 11 ಗಂಟೆಗೆ ಕರೆಯಲಾಗಿದ್ದ ಸಭೆ 12ಗಂಟೆಗೆ ಆರಂಭಗೊಂಡಿತು. 'ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕಡಿಮೆ ದರದ ಚಿಕಿತ್ಸೆ ಸಿಗುತ್ತಿಲ್ಲ. ಜಿಪಂ ಸಿಇಓ, ಡಿಎಚ್ ಓ ಎಲ್ಲೂ ಪರಿಶೀಲನೆ ನಡೆಸುತ್ತಿಲ್ಲ, ಅನಧಿಕೃತವಾಗಿ ತಲೆ ಎತ್ತಿರುವ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಸುವಂತೆ ಸದಸ್ಯ ವೆಂಕಟಸ್ವಾಮಿ ಆಗ್ರಹಿಸಿದರು.

ಸಿಗ್ಮಾ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಪೈಲ್ಸ್ ಆಪರೇಷನ್ ವೇಳೆ ರೋಗಿ ಸಾವನ್ನಪ್ಪಿದ್ದರೂ, ಆಸ್ಪತ್ರೆ 15 ಲಕ್ಷ ಬಿಲ್ ಮಾಡಿತ್ತು. ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಪಂ ಸದಸ್ಯ ವೆಂಕಟಸ್ವಾಮಿ, ಬೀರಿಹುಂಡಿ ಬಸವಣ್ಣ ಆಗ್ರಹಿಸಿದರು. ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆಸ್ಪತ್ರೆ ಸಂಬಂಧ ಕ್ರಮದ ಕೆಪಿಎಂ ಇ ನಲ್ಲಿ ಚರ್ಚಿಸಿದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತೆ ಎಂದು ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ಹೇಳಿದರು.

ಆರೋಗ್ಯ ಇಲಾಖೆ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪದ ವೇಳೆ ಸಭೆಯಲ್ಲಿ ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ರವಿ ಶಂಕರ್ ನಡುವೆ ಮಾತಿನ ಸಮರ ನಡೆಯಿತು. ಏರು ಧ್ವನಿಯಲ್ಲೇ ಪರಸ್ಪರ ಮಾತಿನ ಸಮರಕ್ಕೆ ಇಳಿದರು.

ಸಭೆಗೂ ಮುನ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷರೂ ಸೇರಿದಂತೆ ಎಲ್ಲ ಸದಸ್ಯರೂ ಚಿತ್ರನಟ ದಿ.ಅಂಬರೀಷ್, ಹಿರಿಯ ರಾಜಕಾರಣಿ ಜಾಫರ್ ಶರೀಪ್, ಸುಳ್ವಾಡಿ ಪ್ರಕರಣದಲ್ಲಿ ಸಾವನ್ನಪ್ಪಿದ 17 ಮಂದಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.  

ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ನೇತೃತ್ವದಲ್ಲಿ ಸಭೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News