ಪ್ರೊ.ಭಗವಾನ್ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ವಜಾಗೊಳಿಸಲು ಒತ್ತಾಯ

Update: 2019-01-05 18:02 GMT

ಮೈಸೂರು,ಜ.5: ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ಭಗವಾನ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆಗೊಳಪಡಿಸಿರುವುದನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ಪ್ರಗತಿಪರ ಚಿಂತಕರ ವೇದಿಕೆ, ದಲಿತ ವೆಲ್ ಫೇರ್ ಟ್ರಸ್ಟ್, ಅವರ ಮೇಲೆ ದಾಖಲಾಗಿರುವ ಪ್ರಕರಣವನ್ನು ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಿದವು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದಲಿತ ವೆಲ್‍ಫೇರ್ ಟ್ರಸ್ಟ್ ಗೌರವಾಧ್ಯಕ್ಷ ಶಾಂತರಾಜು ಮಾತನಾಡಿ, ಭಗವಾನ್ ಅವರ ವಿರುದ್ಧ ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಯುತ್ತಿದೆ. ಅವರೊಬ್ಬ ಮಾನಸಿಕ ಅಸಮತೋಲನ ಹೊಂದಿರುವ ಹಿಂದೂ ವಿರೋಧಿಯೆಂದು ಬಿಂಭಿಸಲಾಗುತ್ತಿದೆ. ಇದು ಸರಿಯಲ್ಲ, ತಮಗೂ ಅಭಿವ್ಯಕ್ತ ಸ್ವಾತಂತ್ರ್ಯವಿದ್ದು ಸಂವಿಧಾನದಡಿಯಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸಲು ಅವಕಾಶ ನೀಡಿ ಎಂದು ನುಡಿದರು.

ಭಗವಾನ್ ಅವರ ವಿರುದ್ಧ ಪ್ರತಿಭಟಿಸುತ್ತಿರುವವರು, ಮೊದಲು ಅವರು ಬರೆದಿರುವ “ರಾಮಮಂದಿರ ಏಕೆ ಬೇಡ” ಎಂಬ ಪುಸ್ತಕವನ್ನು ಅಧ್ಯಯನ ಮಾಡಲಿ ನಂತರ ಅಲ್ಲಿರುವ ವಿಚಾರದ ಕುರಿತು ಪ್ರತಿಭಟಿಸಲಿ. ಅದು ಬಿಟ್ಟು, ಸುಮ್ಮನೆ ಅವರ ವಿರುದ್ದ ಪ್ರತಿಭಟನೆ ನಡೆಸುವುದು ಸರಿಯಲ್ಲ. ಇವರು ಇದೇ ರೀತಿ ಮುಂದುವರೆಸಿದರೆ ಅಹಿಂದ ವರ್ಗದವರು ಇವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಉಡುಪಿಯ ಪೇಜಾವರ ಶ್ರೀಗಳು ಭಗವಾನ್ ಇದೇ ರೀತಿ ಹೇಳಿಕೆ ನೀಡಿದರೆ ಅವರಿಗೆ ಕಷ್ಟಕರವಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದ ಅವರು, ಇವರ ಹೇಳಿಕೆ ಗಮನಿಸಿದರೆ ಅವರನ್ನು ಕೊಲೆ ಮಾಡುವ ಪ್ರಯತ್ನ ಆಗುತ್ತಿದೆಯೆನೋ ಎಂಬ ಅನುಮಾನ ಮೂಡುತ್ತಿದೆ. ರಾಮ, ರಾಮರಸ ಕುಡಿಯುತ್ತಿದ್ದ ಎಂಬ ಉಲ್ಲೇಖವನ್ನು ನೀವೇ ಮಾಡುತ್ತೀರಿ. ಅದರರ್ಥ ಅವನು ಮಧ್ಯ ಸೇವಿಸುತ್ತಿದ್ದ ಎಂದು ತಾನೆ ಎಂದು ಪ್ರಶ್ನಿಸಿದರು.

ವಾಕ್ ಸ್ವಾತಂತ್ರ್ಯ, ವಿಮರ್ಶೆ ಸಂವಿಧಾನ ಬದ್ದ ಹಕ್ಕು ಅದನ್ನು ಭಗವಾನ್ ಮಾಡಿದ್ದಾರೆ. ಮೊದಲು ಪುಸ್ತಕವನ್ನು ಓದಿ ನಂತರ ಉತ್ತರ ಕೊಡಿ ಎಂದು ಹೇಳಿದರು.

ಪ್ರಗತಿಪರ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮಾತನಾಡಿ, ತಮಗೂ ಮಾತನಾಡುವ, ಬರೆಯುವ, ವಿಮರ್ಶಿಸುವ, ಸಂಶೋಧಿಸುವ, ಚರ್ಚಿಸುವ ಸ್ವಾತಂತ್ರವಿದ್ದು ಅದನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ನಾವ್ಯಾರೂ ಹಿಂದೂ ಧರ್ಮ ವಿರೋಧಿಗಳಲ್ಲ. ಹಿಂದೂ ಧರ್ಮವನ್ನು ಯಾರೂ ಗುತ್ತಿಗೆ ಪಡೆದಿಲ್ಲ. ಗುತ್ತಿಗೆ ಪಡೆದವರಂತೆ ಹೋರಾಡುವವರ ವಿರುದ್ಧ ತಾವು ಪ್ರತಿ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನಂಜುಂಡಸ್ವಾಮಿ, ಬೋರಪ್ಪ ಶೆಟ್ಟಿ, ಚಿಕ್ಕಂದಾನಿ, ರವೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News