×
Ad

ಮಂಗನ ಕಾಯಿಲೆಯಿಂದ ಮೂವರ ಸಾವು ದೃಢ: ಶಿವಮೊಗ್ಗ ಸಿಇಓ ಶಿವರಾಮೇಗೌಡ

Update: 2019-01-05 23:55 IST
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜ.5: ಮೂವರು ವ್ಯಕ್ತಿಗಳು ಮಂಗನ ಕಾಯಿಲೆಯಿಂದ ಮೃತಪಟ್ಟಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡರವರು ತಿಳಿಸಿದ್ದಾರೆ. 

ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಶಂಕಿತ ಮಂಗನ ಕಾಯಿಲೆಯಿಂದ ಐವರು ಮೃತಪಟ್ಟಿದ್ದರು. ಮೃತರ ರಕ್ತದ ಮಾದರಿಯನ್ನು ಪ್ರಯೋಗಾಲಯದ ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು. ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದ ಪ್ರಯೋಗಾಲಯದ ವರದಿ ಬಂದಿದೆ. 

ಇದರಲ್ಲಿ ಮೂವರ ಸಾವು ಮಂಗನ ಕಾಯಿಲೆಯಿಂದ ಸಂಭವಿಸಿರುವುದು ದೃಡಪಟ್ಟಿದೆ. ಓರ್ವರ ಸಾವಿಗೆ ಲೀವರ್ ಸಂಬಂಧಿತ ಸಮಸ್ಯೆ ಕಾರಣವಾಗಿದೆ. ಉಳಿದಂತೆ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದ ಪ್ರಯೋಗಾಲಯದ ವರದಿ ಬಂದಿಲ್ಲ. ವರದಿ ಬಂದ ನಂತರ ಸಾವಿಗೆ ಕಾರಣವೆನೆಂಬುವುದು ಸ್ಪಷ್ಟವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಒಟ್ಟಾರೆ ಇಲ್ಲಿಯವರೆಗೂ 18 ಜನರಲ್ಲಿ ಮಂಗನ ಕಾಯಿಲೆಯಿರುವುದು ಪತ್ತೆಯಾಗಿದೆ. ಇದರಲ್ಲಿ ಶಿವಮೊಗ್ಗ ಹಾಗೂ ಸಾಗರದ ಆಸ್ಪತ್ರೆಗಳಲ್ಲಿ ತಲಾ ನಾಲ್ವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಂಕಿತರ ರಕ್ತದ ಮಾದರಿ ಸಂಗ್ರಹಿಸಿ ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದ್ದಾರೆ. 

ಮಂಗನ ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ರೋಗ ಪೀಡಿತ ಪ್ರದೇಶಗಳಲ್ಲಿ ಮಂಗಗಳು ಸಾವನ್ನಪ್ಪಿರುವ ಮಾಹಿತಿಯನ್ನು ವೈದ್ಯರಿಗೆ ನೀಡುವ ಸಾರ್ವಜನಿಕರಿಗೆ 300 ರೂ. ಬಹುಮಾನ ನೀಡುವ ಘೋಷಣೆ ಮಾಡಲಾಗಿದೆ. ಪ್ರತಿಯೊಂದು ಮನೆಗಳಿಗೂ 'ಡಿಎಂಪಿ' ತೈಲ ವಿತರಣೆ ಮಾಡಲಾಗಿದೆ. ಮನೆಯಿಂದ ಹೊರಹೋಗುವ ವೇಳೆ ಈ ತೈಲವನ್ನು ಮೈ-ಕೈಗೆ ಹಚ್ಚಿಕೊಂಡರೆ, ಮಂಗನ ಕಾಯಿಲೆಗೆ ಕಾರಣವಾಗುವ ಉಣ್ಣೆಗಳು ಕಚ್ಚುವುದಿಲ್ಲ. ಗ್ರಾಮಸ್ಥರಿಗೆ ಅಗತ್ಯ ಔಷೋಧಪಚಾರ, ವ್ಯಾಕ್ಸಿನ್ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿದೆ. ಜೊತೆಗೆ ಸಾರ್ವಜನಿಕರಲ್ಲಿ ಕಾಯಿಲೆಯ ಕುರಿತಂತೆ ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡ ನಡೆಸಲಾಗುತ್ತಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News