×
Ad

ಶಿವಮೊಗ್ಗ: ಪಿಎಫ್‌ಐ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣೆ

Update: 2019-01-06 14:21 IST

ಶಿವಮೊಗ್ಗ, ಜ.6: ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪಿಎಫ್‌ಐ ರಾಜ್ಯ ಸಮಿತಿಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ವೇತನದ ವಿತರಣಾ ಕಾರ್ಯಕ್ರಮವು ಶನಿವಾರ ಇಲ್ಲಿನ ಮುಸ್ಲಿಮ್ ಹಾಸ್ಟೆಲ್ ನ ಅಮೀರ್ ಅಹ್ಮದ್ ಸಭಾಂಗಣದಲ್ಲಿ ಜರುಗಿತು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲೆಯ ಅಲ್ ಹಬೀಬ್ ಶಾಲೆಯ ನಿರ್ವಾಹಕ ಇಫ್ತೆಖಾರ್ ಅಹ್ಮದ್, ‘ಮುಸ್ಲಿಂ ಸಮಾಜದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದೆ. ಅದರಲ್ಲೂ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಹೆತ್ತವರು ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ. ಆದರೆ, ಶಿಕ್ಷಣದಲ್ಲಿ ಮುಸ್ಲಿಂ ಹುಡುಗರ ಸಾಧನೆ ನಿರೀಕ್ಷಿಸಿದಷ್ಟು ಇಲ್ಲ. ಸಮಾಜದ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುವ ಮುಸ್ಲಿಂ ಯುವಕರು ಶಿಕ್ಷಣದ ಬಗ್ಗೆಯೂ ಒಲವು ತೋರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಿಎಫ್‌ಐಯಂತಹ ಸಾಮಾಜಿಕ ಸಂಘಟನೆಗಳು ನೀಡುತ್ತಿರುವ ಇಂತಹ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆದುಕೊಳ್ಳಬೇಕಿದೆ ಎಂದರು.

ಪಿಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಶರೀಫ್ ಕೊಡಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಿಲಾಲ್ ಮಸೀದಿಯ ಇಮಾಮ್ ಸೈಯದ್ ಬಾಸಿತ್ ಮಾತನಾಡಿದರು. ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯೆ ಶಬಾನಾ ಖಾನ್, ಹಾಗೂ ಎಸ್.ಡಿ.ಪಿ.ಐ. ಶಿವಮೊಗ್ಗ ಜಿಲ್ಲಾಧ್ಯಕ್ಷ ಸಲೀಂ ಖಾನ್  ಉಪಸ್ಥಿತರಿದ್ದರು.

ಪಿಎಫ್ಐ ಶಿವಮೊಗ್ಗ ಜಿಲ್ಲಾಧ್ಯಕ್ಷ ಶಾಹಿದ್ ಖಾನ್ ಕಾರ್ಯಕ್ರಮ ನಿರೂಪಿಸಿದರು. ಪಿಎಫ್ಐ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಸೈಯದ್ ರಿಝ್ವಾನ್ ವಂದಿಸಿದರು.

ಕಾರ್ಯಕ್ರಮದಲ್ಲಿ 62 ವಿದ್ಯಾರ್ಥಿಗಳಿಗೆ 3.5 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News