×
Ad

ಕೇರಳ ಸಿಎಂ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ ಸಂಘಪರಿವಾರ ಕಾರ್ಯಕರ್ತರು

Update: 2019-01-06 16:18 IST

#ಕಾರ್ಮಿಕ ಸಂಘಟನೆಗಳ ಮುಷ್ಕರ ಪೋಸ್ಟರ್ ಹರಿದ ಪ್ರತಿಭಟನಕಾರರು

ಸಿದ್ದಾಪುರ (ಕೊಡಗು), ಜ.6: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳ ಸರಕಾರದ ವಿರುದ್ಧ ನೆಲ್ಯಹುದಿಕೇರಿಯ ಅಯ್ಯಪ್ಪ‌ ಸೇವಾ ಸಮಿತಿಯು ಆಯೋಜಿಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ವರದಿಯಾಗಿದೆ.

ನೆಲ್ಯಹುದಿಕೇರಿಯ ಮುತ್ತಪ್ಪ ದೇವಸ್ಥಾನದಿಂದ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದವರೆಗೆ ಬಿಜೆಪಿ ಸೇರಿದಂತೆ ಸಂಘಪರಿವಾರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರನ್ನು  ಅವಾಚ್ಯ ಪದಗಳಿಂದ ನಿಂದಿಸಿ ಘೋಷಣೆ ಕೂಗಲಾಯಿತು. ಸಿದ್ದಾಪುರದ ರಾಮ ಮಂದಿರದ ಮುಂದೆ ಸಿಪಿಎಂ ಪಕ್ಷದ ಧ್ವಜವನ್ನು ಸುಡುವ ಮೂಲಕ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಜನವರಿ 8 ಮತ್ತು 9 ರಂದು ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದೇಶಾದ್ಯಂತ ನಡೆಯಲಿರುವ ಸಾರ್ವತ್ರಿಕ ಮುಷ್ಕರದ ಬಿತ್ತಿ ಪತ್ರಗಳನ್ನು ಹರಿದು ಬಿಸಾಕಿದರು.

ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಇಲ್ಲಿನ ಬಸ್ ನಿಲ್ದಾಣದ ಸಮೀಪದಲ್ಲಿ ನಡೆಯುತ್ತಿದ್ದ ವಾಹನ ಜಾಥಾದ ಸಭೆಯ ಸಮೀಪಕ್ಕೆ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ, ಸಿಪಿಎಂ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದರು. ತಕ್ಷಣ ಸಿದ್ದಾಪುರ ಪಿ.ಎಸ್.ಐ ದಯಾನಂದ ನೇತೃತ್ವದ ಪೊಲೀಸ್ ತಂಡ ಮಧ್ಯ ಪ್ರವೇಶಿಸಿದರು. ಈ ಸಂದರ್ಭ ಪೊಲೀಸರಿಗೂ ಸಂಘಪರಿವಾರ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ಪೊಲೀಸರು ಕಾರ್ಯಕರ್ತರನ್ನು ವಾಪಸ್ ಕಳುಹಿಸಿದರು.

ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನಾತ್ಮಕವಾಗಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ನೀಡಲಾಗಿದೆ. ನೂರಾರು ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಜನವರಿ 8 ಮತ್ತು 9 ರಂದು ಹಮ್ಮಿಕೊಂಡಿರುವ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಬಗ್ಗೆ ಸಾಮಾನ್ಯ ಜ್ಞಾನವಿಲ್ಲದೆ, ವಾಹನ ಜಾಥಾಗೆ ತೊಂದರೆ ಉಂಟು ಮಾಡಲು ಯತ್ನಿಸಿದ ಕಿಡಿಗೇಡಿಗಳ ಕೃತ್ಯ ಖಂಡನೀಯ. ಕನ್ನಡದ ಬಗ್ಗೆ ತಿಳುವಳಿಕೆ ಇಲ್ಲದವರು ಮುಷ್ಕರದ ಬಿತ್ತಿ ಪತ್ರಗಳನ್ನು ಹರಿದಾಕಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಮುಂದಾಗಿರುವವರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಮುಖಂಡ ಪಿ.ಆರ್ ಭರತ್ ಒತ್ತಾಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News