ತಂದೆಯ ಆದರ್ಶ ಅನುಕರಿಸಿದ ಧೀಮಂತ ಅಧಿಕಾರಿ ಮಧುಕರ್ ಶೆಟ್ಟಿ: ನ್ಯಾ.ಎನ್.ಸಂತೋಷ್ ಹೆಗ್ಡೆ
ಬೆಂಗಳೂರು, ಜ.6: ತಂದೆ ಆದರ್ಶಗಳನ್ನು ಅನುಕರಣೆ ಮಾಡಿದ ಧೀಮಂತ ಜನಪರ ಸೇವಕ ಡಾ.ಮಧುಕರ ಶೆಟ್ಟಿ ಎಂದು ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ರವಿವಾರ ವಿಜಯನಗರದಲ್ಲಿ ಬಂಟರ ಸಂಘ ಆಯೋಜಿಸಿದ್ದ ಡಾ.ಮಧುಕರ ಶೆಟ್ಟಿ ನುಡಿ ನಮನದಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಮಗನಾಗಿ ಅವರ ಆದರ್ಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದ ಮಧುಕರ ಶೆಟ್ಟಿ, ಸಮಾಜದ ಏಳಿಗೆಗೆ ಶ್ರದ್ಧೆಯಿಂದ ದುಡಿದ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂದು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಮುಧುಕರ ಶೆಟ್ಟಿಯವರ ಪಾರ್ಥಿವ ಶರೀರವನ್ನು ನೋಡಲು ಸೇರಿದ ಅಪಾರ ಅಭಿಮಾನಿ ಬಳಗವೇ ಸಾಕು ಅವರು ಹಣಕ್ಕಿಂತ ಮಿಗಿಲಾದದ್ದನ್ನು ಸಂಪಾದಿಸಿದ್ದಾರೆ ಎಂಬುದನ್ನು ತಿಳಿಸುತ್ತದೆ. ಆದರೆ, ಕೆಲವು ಭ್ರಷ್ಟ ರಾಜಕರಣಿಗಳು ಅವರ ಸಾವನ್ನು ಸಂಭ್ರಮಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಲೋಕಾಯುಕ್ತಕ್ಕೆ ಸೇರಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರು. ಒಬ್ಬ ಮಂತ್ರಿ ತನಗೆ ಬಂದ ಮಾಹಿತಿಯನ್ನು ದುರುಪಯೋಗ ಮಾಡಿಕೊಂಡಾಗ, ಮಂತ್ರಿ ಹಾಗೂ ಮಂತ್ರಿ ಮಗನನ್ನು ಜೈಲಿಗೆ ಕಳಿಸುವ ಮೂಲಕ ದೇಶದಲ್ಲಿ ಹೊಸ ಸಂಚಲನ ಮೂಡಿಸಿದರು ಎಂದು ಹೇಳಿದರು.
ನಿವೃತ್ತ ಐಪಿಎಸ್ ಅಧಿಕಾರಿ ಗುರು ಪ್ರಸಾದ್ ಮಾತನಾಡಿ, ನನ್ನ ವೃತ್ತಿ ಜೀವನದಲ್ಲಿ 600ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳ ಜೊತೆ ಕೆಲಸ ಮಾಡಿದ್ದೇನೆ. ಅಷ್ಟು ಅಧಿಕಾರಿಗಳಲ್ಲಿ ಹೃದಯ ಮೆಚ್ಚಿದ ಅಧಿಕಾರಿ ಮಧುಕರ ಶೆಟ್ಟಿ. ಜೆಎನ್‌ಯುನಲ್ಲಿ ಓದಿದ ಅವರು. ಬೇರೆಯವರಿಗೆ ತುಂಬಾ ಆದರ್ಶ ವ್ಯಕ್ತಿಯಾಗಿ ಬದುಕಿದ್ದರು. ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಮಗ ಎಂದು ತಿಳಿದಾಗ ಅವರ ಮೇಲಿನ ಪ್ರೀತಿ ದುಪ್ಪಟ್ಟಾಯಿತು ಎಂದು ಭಾವುಕರಾದರು.
ನನ್ನ ಬಳಿ ಎಲ್ಲ ನೋವನ್ನೂ ಹಂಚಿಕೊಳ್ಳುತ್ತಿದ್ದ ಮಧು. ಅಧಿಕಾರದಲ್ಲಿ ಅನೇಕ ನೋವು- ನಲಿವುಗಳನ್ನು ಅನುಭವಿಸಿದ್ದರು. ನಕ್ಸಲ್ ಮನೆಗೆ ಹೋಗಿ ಊಟ ಮಾಡುತ್ತಾರೆ ಎಂದು ದೂರು ಬಂದಾಗ, ಅವರ ವರ್ಗಾವಣೆಗೆ ಅದೇಶ ಬಂತು. ಇದರ ಕುರಿತು ಮಧುರವರನ್ನು ಕೇಳಿದಾಗ, ಏಕೆ ನಕ್ಸಲ್ ಆಗುತ್ತಾನೆ ಹಾಗೂ ನಕ್ಸಲ್‌ರ ಸಾಮಾಜಿಕ ಆರ್ಥಿಕ ಸ್ಥಿತಿಗಳ ಗಂಭೀರವಾದ ಸಂರಚನೆಯನ್ನು ತಿಳಿಸಿದರು. ಇದರಿಂದ ಅವರ ಮೇಧಾವಿತನ ಗೊತ್ತಾಯಿತು ಎಂದು ನುಡಿದರು.
ಕಾಡುಗಳ್ಳ ವೀರಪ್ಪನ್‌ನನ್ನು ಸಾಯಿಸಿದ್ದು ನಾನೇ ಎಂದು ಎಲ್ಲರೂ ಢಂಗುರ ಹೊಡೆದು ಕೊಂಡು ಬೆಂಗಳೂರಿನಲ್ಲಿ ಸೈಟ್ ಪಡೆದುಕೊಂಡರು. ಆದರೆ, ಮಧು ಪಡೆಯಲಿಲ್ಲ. ನನಗೆ ಸರಕಾರ ಸಂಬಳ ನೀಡುತ್ತೆ. ಅಲ್ಲದೆ, ನನ್ನ ಕರ್ತವ್ಯವನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
ಅಪರಾಧ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾತನಾಡಿ, ನಾವು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಷ್, ಭಗತ್‌ಸಿಂಗ್‌ರ ಆದರ್ಶಗಳನ್ನು ಓದುತ್ತೇವೆ. ಆದರೆ, ಮಧು ಅದನ್ನು ಪಾಲನೆ ಮಾಡುತ್ತಿದ್ದರೂ. ಭ್ರಷ್ಟರಲ್ಲಿ ನಡುಕ ಹುಟ್ಟಿಸುವ ವ್ಯಕ್ತಿತ್ವ ಹೊಂದಿದ್ದರು ಹಾಗೂ ಕೆಲಸದ ವಿಷಯದಲ್ಲಿ ಪಕ್ಕ ಆಗಿದ್ದರು. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ನೀಡುತ್ತಿರಲಿಲ್ಲ, ಬದಲಿಗೆ ಪರಿವರ್ತನೆ ತರುತ್ತಿದ್ದರು ಎಂದರು.
ಹಣಕ್ಕೆ ಎಂದೂ ಮಹತ್ವ ನೀಡಿದ ಅವರು ಪ್ರಚಾರ ಪ್ರಿಯರಾಗದೆ, ಅಪರವಾದ ಅಭಿಮಾನಿ ಬಳಗವನ್ನು ಹೊಂದಿದ್ದರು. ಅವರ ಜೊತೆಯಲ್ಲಿ ಚರ್ಚೆ ಮಾಡುವಾಗ ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್‌ರಂತಹ ಸ್ವತಂತ್ರ ಯೋಧರ ಜೊತೆ ಇದ್ದೇನೆ ಎಂದು ಭಾಸವಾಗುತ್ತಿತ್ತು. ಮುಂದಿನ ದಿನದಲ್ಲಿ ಅವರ ಹೆಸರಲ್ಲಿ ಮ್ಯೂಸಿಯಂ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು.