ಪೌರಕಾರ್ಮಿಕರ ವಸತಿಗೃಹ ನಿರ್ಮಾಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ಶಂಕುಸ್ಥಾಪನೆ
ಬೆಳಗಾವಿ, ಜ.6: ಮಹಾನಗರ ಪಾಲಿಕೆಯ ವತಿಯಿಂದ ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಜಿ+3 ಮಾದರಿಯ ವಸತಿಗೃಹಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಶಂಕುಸ್ಥಾಪನೆ ನೆರವೇರಿಸಿದರು.
ರವಿವಾರ ಅಝಮ್ ನಗರ ರಸ್ತೆಯಲ್ಲಿರುವ ಪಿ.ಕೆ.ಕ್ವಾರ್ಟರ್ಸ್ ಕಾಲನಿಯಲ್ಲಿ ಜಿ+3 ಮಾದರಿಯ ವಸತಿಗೃಹಗಳ ನಿರ್ಮಾಣಕ್ಕೆ ಚಾಲನೆ ನೀಡಿದ ಅವರು, ಗೃಹಭಾಗ್ಯ ಯೋಜನೆಯಡಿ ಕೈಗೊಳ್ಳಲಾಗಿರುವ ವಸತಿಗೃಹ ನಿರ್ಮಾಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೂ ಮುನ್ನು ಪೌರಕಾರ್ಮಿಕರ ಕಾಲನಿಯಲ್ಲಿ ಒಂದು ಸುತ್ತು ಹಾಕಿದ ಜಾರಕಿಹೊಳಿ, ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಪೌರಕಾರ್ಮಿಕರು ಹಾಗೂ ಲಭ್ಯವಿರುವ ವಸತಿಗೃಹಗಳ ಬಗ್ಗೆ ಪಾಲಿಕೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಕ್ರಮ: ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಪ್ರಾಣಿ ಉದ್ಯಾನದಲ್ಲಿರುವ ಸಂಗ್ರಹಾಲಯವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇದೇ ಸಂದರ್ಭದಲ್ಲಿ ಅವರು ಚಾಲನೆ ನೀಡಿದರು.
ಪ್ರಾಣಿಸಂಗ್ರಹಾಲಯಕ್ಕೆ ಮೊದಲ ಹಂತದಲ್ಲಿ ಎರಡು ಹುಲಿಗಳನ್ನು ತರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇತರೆ ಪ್ರಾಣಿಗಳನ್ನು ತರಿಸಲಾಗುವುದು. ಉದ್ಯಾನ ಮತ್ತು ಪ್ರಾಣಿ ಸಂಗ್ರಹಾಲಯಕ್ಕೆ ಕುಡಿಯುವ ನೀರು ಪೂರೈಸಲು ಮಾರ್ಕಂಡೇಯ ನದಿಯಿಂದ ನೀರು ಒದಗಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಸುರೇಶ್ ಅಂಗಡಿ, ಮಹಾಪೌರ ಬಸಪ್ಪಚಿಕ್ಕಲದಿನ್ನಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತ ಶಶಿಧರ್ ಕುರೇರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ.ಕರುಣಾಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಅಮರನಾಥ್, ಪಾಲಿಕೆ ಸದಸ್ಯೆ ಸರಳಾ ಹೇರೇಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.