ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣಕ್ಕೆ ಸಂವಿಧಾನ ತಿದ್ದುಪಡಿಯಾಗಲಿ: ಸಿದ್ದರಾಮಯ್ಯ

Update: 2019-01-06 14:35 GMT

ಧಾರವಾಡ, ಜ.6 (ಅಂಬಿಕಾತನಯದತ್ತ): ದೇಶದ ಎಲ್ಲ ರಾಜ್ಯಗಳ ಒಂದರಿಂದ 7ನೆ  ತರಗತಿವರೆಗಿನ ಶಿಕ್ಷಣವನ್ನು ರಾಷ್ಟ್ರೀಕರಗೊಳಿಸಲು ಕೇಂದ್ರ ಸರಕಾರ ರಾಜ್ಯಗಳ ಒಪ್ಪಿಗೆ ಪಡೆದು ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ರವಿವಾರ ನಗರದ ಕೃಷಿ ವಿವಿಯಲ್ಲಿ ಮೂರು ದಿನಗಳ ಕಾಲ ನಡೆದ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ರಾಜ್ಯ ಮತ್ತು ಕೇಂದ್ರಗಳ ಪಟ್ಟಿಯಲ್ಲಿ ಬರುವುದಿಲ್ಲ. ಇದು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಹಾಗಾಗಿ ಕೇಂದ್ರ ಸರಕಾರ ಅಗತ್ಯವಾದರೆ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂವಿಧಾನಕ್ಕೆ ತಿದ್ದುಪಡಿ ತಂದು ಪ್ರಾದೇಶಿಕ ಭಾಷೆಗಳನ್ನು ರಕ್ಷಿಸಬೇಕೆಂದು ತಿಳಿಸಿದರು.

ಇಂಗ್ಲಿಷ್ ಮಾಧ್ಯಮ ವಿಷಯಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯವರು ಶೀಘ್ರ ಸಭೆ ಕರೆಯುವುದಾಗಿ ಹೇಳಿದ್ದಾರೆ. ಅಲ್ಲಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಬಹುಸಂಖ್ಯಾತರು ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಆಗಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಭಾಷೆ ಮತ್ತು ಮಾಧ್ಯಮದ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಜ್ಞಾನಕ್ಕೆ ಇಂಗ್ಲಿಷ್ ಉತ್ತರ ಅಲ್ಲ. ಭಾಷಾ ಸಮಸ್ಯೆಗಳಿಗೂ ಇಂಗ್ಲಿಷ್ ಉತ್ತರ ಅಲ್ಲ. ಕನ್ನಡಕ್ಕೆ 2000 ವರ್ಷಗಳ ಇತಿಹಾಸವಿದೆ. ಇಂಗ್ಲಿಷ್‌ಗೆ ಇಡೀ ವಿಶ್ವವನ್ನು ಆಳುವ ಶಕ್ತಿ ಇದ್ದರೆ ಕನ್ನಡಕ್ಕೆ ಯಾಕಿಲ್ಲ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಭಾಷೆ, ನೆಲ, ಜಲ ವಿಷಯ ಬಂದಾಗ

ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಭಾಷೆಯ ನಾಮಫಲಕಗಳನ್ನು ತೆಗೆಸಿ ಕನ್ನಡ ನಾಮಫಲಕಗಳನ್ನು ಹಾಕಿಸಿದ್ದೆ. ಎಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವಂತೆ ಹಾಗೂ ಎಲ್ಲಾ ಕನ್ನಡ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ಅನ್ನು ಒಂದು ಭಾಷೆಯಾಗಿ ಕಲಿಸಲು ಆದೇಶ ನೀಡಿದ್ದೆ ಎಂದು ಅವರು ಹೇಳಿದರು.

ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ಬೇಕು ಅದಕ್ಕಾಗಿ ತಾವು ಮುಖ್ಯಮಂತ್ರಿಯಾಗಿದ್ದಾಗ ಸಮಿತಿಯೊಂದನ್ನು ರಚಿಸಿದ್ದೆ. ಸಮಿತಿ ವರದಿ ನೀಡಿದ ತಕ್ಷಣ ಕನ್ನಡ ಬಾವುಟಕ್ಕೆ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ, ಕೇಂದ್ರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಸಮ್ಮೇಳನದ ಮೂಲಕ ಮತ್ತೊಮ್ಮೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ನಾನು ಕೂಡ ಉತ್ತರ ಕರ್ನಾಟಕದವನೆ ಆಗಿದ್ದೇನೆ. ನಾನು ಯಾವತ್ತೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕವಾಗಿ ನೋಡಿಲ್ಲ. ಇಲ್ಲಿನ ಜನರು ಪ್ರತೇಕತೆಯನ್ನು ಯಾವತ್ತಿಗೂ ಬಯಸುವುದಿಲ್ಲ. ಆದರೆ ಕೆಲವು ರಾಜಕೀಯ ಸ್ವಾರ್ಥಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರತ್ಯೇಕತೆಯ ಕೂಗು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಹಿರಿಯ ಸಾಹಿತಿಗಳಾದ ಹಂಪಾ ನಾಗರಾಜ್, ಚನ್ನವೀರ ಕಣವಿ, ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ, ಸಚಿವ ಸಿ.ಎಸ್.ಶಿವಳ್ಳಿ, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News