×
Ad

ಪೂರ್ಣಕುಂಭ ಮೆರವಣಿಗೆ ಶೋಷಣೆಯ ಸಂಕೇತ: ಪ್ರತಿಭಟನೆ ದಾಖಲಿಸಿದ ಹಿರಿಯ ಪತ್ರಕರ್ತ ಇಸ್ಮಾಯಿಲ್

Update: 2019-01-06 20:23 IST

ಧಾರವಾಡ, ಜ.7: ಇಲ್ಲಿ ನಡೆದ ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸಮ್ಮೇಳನದ ಸಭಾಧ್ಯಕ್ಷರ ಮೆರವಣಿಗೆ ಸಂದರ್ಭದಲ್ಲಿ 1001 ಸುಮಂಗಲಿಯರ ಕೈಯಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಸಿದ್ದಕ್ಕೆ ನನ್ನ ವಿರೋಧವಿದೆ. ಇದು ಶೋಷಣೆಯ ಸಂಕೇತ ಎನ್ನುವ ಮೂಲಕ ಹಿರಿಯ ಪತ್ರಕರ್ತ ಎನ್.ಎಂ.ಎ.ಇಸ್ಮಾಯಿಲ್ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. 

ನಗರದ ಕೃಷಿ ವಿವಿಯಲ್ಲಿ ನಡೆದ 84 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದ ಡಾ.ಶಂ.ಬಾ.ಜೋಶಿ ವೇದಿಕೆಯಲ್ಲಿ ಸಂಕೀರ್ಣ ಎಂಬ ವಿಷಯದ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣ ಅವಕಾಶಗಳು ಮತ್ತು ಸವಾಲುಗಳ ವಿಷಯದ ಕುರಿತು ಮಾತನಾಡಲು ಬಂದಿದ್ದ ಅವರು, ತಮ್ಮ ಭಾಷಣ ಆರಂಭಿಸುವ ಮೊದಲೇ ಪೂರ್ಣಕುಂಭ ಮೆರವಣಿಗೆ  ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸುವ ಮೂಲಕ ಮಾತುಗಳನ್ನಾಡಿದ್ದು ವಿಶೇಷವಾಗಿತ್ತು.

ಅನಂತರ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಹಾಗೂ ಅವುಗಳನ್ನು ನಿರ್ವಹಿಸುತ್ತಿರುವವರು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2008 ರಲ್ಲಿ ವಿಶ್ವ ಆರ್ಥಿಕ ಫೋರಂ ಮುಂದಿನ 15 ವರ್ಷಗಳಲ್ಲಿ ಯಾವುದೇ ಪುಸ್ತಕಗಳಿರುವುದಿಲ್ಲ ಎಂದು ಭವಿಷ್ಯ ನುಡಿದಿತ್ತು. ಆದರೆ, ಇದುವರೆಗೂ ಅಂತಹ ಯಾವುದೂ ನಡೆದಿಲ್ಲ. ಬದಲಿಗೆ ಹೆಚ್ಚು ಪುಸ್ತಕ ಓದುವವರ ಸಂಖ್ಯೆ ಅಧಿಕವಾಗುತ್ತಿದೆ ಎಂದು ಹೇಳಿದರು.

ಪುಸ್ತಕ ಎಂಬುದು ಸಾರ್ವಕಾಲಿಕವಾದುದು. ಅದರ ಕುರಿತು ಯಾರೂ ಭವಿಷ್ಯ ನುಡಿಯಲು ಸಾಧ್ಯವಿಲ್ಲ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. 2016 ರಲ್ಲಿ ನಡೆದ ಸರ್ವೆಯೊಂದರಲ್ಲಿ ಶೇ.88 ರಷ್ಟು ಜನರು ಇಂಟರ್ ನೆಟ್ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ಸಭಾಂಗಣದಲ್ಲಿ ಮುಂದೆ 2039 ಕ್ಕೇನಾದರೂ ಸಮ್ಮೇಳನ ನಡೆದರೆ ಎಲ್ಲರೂ ಆನ್‌ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡಿರುತ್ತಾರೆ. ಯಾವ ಯಾವ ಹಿನ್ನೆಲೆಯವರು ಸಮ್ಮೇಳನಕ್ಕೆ ಬರುತ್ತಾರೆಂದು ಗೊತ್ತಾಗುತ್ತದೆ. ಅನಂತರ ನಾವು ಏನು ಮಾತನಾಡಬೇಕು ಎಂದು ನೋಟ್ಸ್ ಮಾಡಿಕೊಂಡು ಬಂದು ಬಿಟ್ಟರೆ ನಿಮಗೂ ಖುಷಿಯಾಗುತ್ತದೆ, ನಮಗೂ ಸಂತೋಷವಾಗುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಪರಿಸರವಾದಿ ನಾಗೇಶ ಹೆಗಡೆ ಮಾತನಾಡಿ, ಭಾರತ ಅಭಿವೃದ್ಧಿಶೀಲ ರಾಷ್ಟ್ರವಲ್ಲ, ಇದೀಗ ಅಭಿವೃದ್ಧಿ ಸಾಧಿಸ್ತಾ ಇದೀವಿ. ಅಭಿವೃದ್ಧಿ ಕಡೆಗೆ ಹೋಗುತ್ತಿದ್ದೇವೆ ಹೊರತು ಅಭಿವೃದ್ಧಿ ಶೀಲದ ಕಡೆಗೆ ಹೋಗುತ್ತಿಲ್ಲ. ಇತ್ತೀಚಿಗೆ ದೇಶದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದರೆ, ಹಿಂದಿನ ವರ್ಷಗಳಲ್ಲಿ ಒಂದು ವಿಷಯ ತಿಳಿಯಲು ಕಾಯಬೇಕಿತ್ತು ಎಂದ ಅವರು, ಎರಡೂವರೆ ಸಾವಿರ ವರ್ಷಗಳ ಹಿಂದಿನ ಒಕ್ಕಲುತನ ಮಾಡುವುದು ನಮಗೆ ಪರಿಚಯವಾಗಿದ್ದು ತಡವಾಗಿ. ಅದೇ ರೀತಿ ರೇಡಿಯೋ, ಟಿವಿ ಸೇರಿದಂತೆ ಮತ್ತಿತರೆ ತಂತ್ರಜ್ಞಾನ ಎಲ್ಲವೂ ಇತ್ತೀಚಿಗೆ ಪರಿಚಯವಾಗಿದೆ. ಆದರೆ, ಇಂದಿನ ಪೇಸ್‌ಬುಕ್, ಟ್ವಿಟರ್ ಕಾಲದಲ್ಲಿನ ಆವಿಷ್ಕಾರಗಳು ಕ್ಷಣಮಾತ್ರದಲ್ಲಿ ನಮಗೆ ತಲುಪುತ್ತಿವೆ ಎಂದರು.

ದೇಶದಲ್ಲಿ ಅತಿಯಾದ ತಂತ್ರಜ್ಞಾನ ಬಳಕೆಯಾಗುತ್ತಿದ್ದು ಜನರ ಬದುಕನ್ನು ನುಂಗುವ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ. ಕೃಷಿಯಲ್ಲಿ ತಂತ್ರಜ್ಞಾನ ಆಧಾರಿತ ಟ್ರಾಕ್ಟರ್ ಬಳಕೆ ಅದಕ್ಕೆ ಉದಾಹರಣೆಯಾಗಿದೆ. ರಾಜ್ಯದ 11 ಜಿಲ್ಲೆಗಳು ಬರಪೀಡಿತವಾಗಿವೆ. ದೇಶದಲ್ಲಿ ರಾಜಸ್ಥಾನ ಮೊದಲನೇ ಮರುಭೂಮಿಯಾದರೆ, ಎರಡನೆಯದಾಗಿ ಕರ್ನಾಟಕ ತಯಾರಾಗುತ್ತಿದೆ. ಮರುಭೂಮಿಯಾಗುವಂತೆ ನಾವೇ ಪೋಷಣೆ ಮಾಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಡಾ.ಎಂ.ವೆಂಕಟಸ್ವಾಮಿ ಪ್ರಾಕೃತಿಕ ವಿಕೋಪ: ಎದುರಾಗಿರುವ ಹೊಸ ಸವಾಲು/ನಿರ್ವಹಣೆಹಾಗೂ ಡಾ.ನಾ.ಸೋಮೇಶ್ವರ ವೈದ್ಯ ಸಾಹಿತ್ಯಕುರಿತ ವಿಚಾರ ಮಂಡನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News