ನಾನು ಎಡಪಂಥೀಯನೂ ಹೌದು, ಬಲಪಂಥೀಯನೂ ಹೌದು: ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ

Update: 2019-01-06 15:49 GMT

ಧಾರವಾಡ, (ಅಂಬಿಕಾತನಯದತ್ತ ವೇದಿಕೆ) ಜ.6: ನನಗೆ ಇಂದಿಗೂ ಎಡಪಂಥೀಯ, ಬಲಪಂಥೀಯದ ಬಗ್ಗೆ ಅರ್ಥವಾಗಿಲ್ಲ. ಹೀಗಾಗಿ ನನಗೆ ಎರಡು ಕೈಗಳಿರುವುದರಿಂದ ನಾನು ಎಡನೂ ಹೌದು, ಬಲನೂ ಹೌದೆಂದು 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ತಿಳಿಸಿದರು.

ರವಿವಾರ ನಗರದ ಕೃಷಿ ವಿವಿಯಲ್ಲಿ ಆವರಣದಲ್ಲಿ ಆಯೋಜಿಸಿದ್ದ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಡ, ಬಲ ಏನೆಂಬುದನ್ನು ಇಲ್ಲಿಯವರೆಗೂ ನಾನು ಕಂಡಿಲ್ಲ. ಈ ಕುರಿತು ಪ್ರಶ್ನೆ ಕೇಳಿದ ಮೇಲೆ ಯೋಚಿಸುವಂತಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ನನ್ನ ಸಹಪಾಠಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ನಾನು ಎತ್ತಿ ಆಡಿಸಿದ ಮಗು. ಇವರಿಬ್ಬರ ಸಾವಿನಿಂದ ಅತಿಯಾದ ದುಃಖವಾಗಿದೆ. ಇದನ್ನು ಸಾರ್ವಜನಿಕವಾಗಿ ತೋರ್ಪಡಿಸುವ ಅಗತ್ಯವಿಲ್ಲ. ಈ ಪ್ರಕರಣಗಳ ಕುರಿತು ನಾನು ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಅದನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪೂರ್ಣ ಕುಂಬಮೇಳ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೂರ್ಣ ಕುಂಭ ಮೆರವಣಿಗೆಯಲ್ಲಿ ಸ್ತ್ರೀಯರಿಗೆ ಅನ್ಯಾಯವಾಗಿದೆ ಎಂದು ನಾನು ಭಾವಿಸುವುದಿಲ್ಲ. ಈ ಬಗ್ಗೆ ಪರಿಷತ್ ಸರಿಯಾದ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ.

ಸ್ತ್ರೀ ಬದುಕು ಕಟ್ಟುವ ಕೆಲಸ ಮಾಡಿದರೆ, ಪುರುಷ ಅಹಂಕಾರ ಪ್ರದರ್ಶಿಸಿ ಎಲ್ಲವನ್ನೂ ಗೆಲ್ಲುವ ಪ್ರವೃತ್ತಿ ಹೊಂದಿದ್ದಾನೆ. ಸ್ತ್ರೀ ಹೆತ್ತು ಹೊತ್ತು ಸಾಕಿ ಸಲಹಿದರೆ, ಗಂಡ ಯುದ್ಧ ಮಾಡಿ ಆಳುವ, ಅಧಿಪತ್ಯ ಸ್ಥಾಪಿಸುವ ಮನಸ್ಥಿತಿ ಹೊಂದಿದ್ದಾನೆ. ಸ್ತ್ರೀ ಮರದಂತೆ ಬೀಜ ಬಿತ್ತಿ ಸಮಾಜವನ್ನು ಬೆಳೆಸುತ್ತಾಳೆ. ಇಂತಹ ಸ್ತ್ರೀಯರಿಗೆ ಅನ್ಯಾಯವಾದರೆ ನಾನು ಸುಮ್ಮನಿರುವುದಿಲ್ಲ. ಆದರೆ ಕುಂಭ ಮೆರವಣಿಗೆಯಲ್ಲಿ ಯಾರಿಗೂ ಅನ್ಯಾಯವಾಗಿಲ್ಲ ಎಂದು ಹೇಳಿದರು.

ವಿದ್ಯೆಯನ್ನು ಸೃಷ್ಟಿಸುವುದನ್ನು ಕಲಿಯಬೇಕು. ಈ ಚಿಂತನೆಯಿಂದಲೇ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಲು ಸಾಧ್ಯವಾಯಿತು. ಇದಕ್ಕೆ ಆಗಿನ ಸರಕಾರದ ಸಂಪೂರ್ಣ ಬೆಂಬಲ ಇದ್ದುದು ಕೂಡ ನಮ್ಮ ಸುದೈವ. ಮುಂದಿನ ತಲೆಮಾರು ಪಾಶ್ಚಾತ್ಯದಿಂದ ಕಲಿಯುವುದಕ್ಕಿಂತ ಈ ನೆಲದೊಳಗೆ ಈಗಾಗಲೇ ಹಾಸುಹೊಕ್ಕಾಗಿರುವ ವಿದ್ಯೆಯನ್ನು ಪುನರ್ ಸೃಷ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಇಂಗ್ಲಿಷ್ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಎಲ್ಲಾ ಸಲಕರಣೆಗಳನ್ನು ಕನ್ನಡ ಭಾಷೆ ಪ್ರಚಾರಕ್ಕೂ ಬಳಸಿಕೊಳ್ಳಬೇಕು. ಈ ಬಗ್ಗೆ ನಾನು ಮತ್ತು ಪೂರ್ಣಚಂದ್ರ ತೇಜಸ್ವಿ ಹಲವು ಕೆಲಸಗಳನ್ನು ಮಾಡಿದ್ದು, ಹಲವು ರಾಜಕಾರಣಿಗಳನ್ನು ಭೇಟಿಯಾಗಿದ್ದೇವೆ. ಆದರೆ ಬಿ.ಎಸ್,ಯಡಿಯೂರಪ್ಪ ಹೊರತುಪಡಿಸಿ ತಮಗೆ ಯಾರೂ ಬೆಂಬಲ ನೀಡಲಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News