ಅರಣ್ಯ ಅಧಿಕಾರಿಗೆ ಭದ್ರಾವತಿ ಶಾಸಕರಿಂದ ಜೀವ ಬೆದರಿಕೆ: ಆರೋಪ

Update: 2019-01-06 16:43 GMT

ಶಿವಮೊಗ್ಗ, ಜ. 6: ಅರಣ್ಯಾಧಿಕಾರಿಯೊಬ್ಬರಿಗೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ್ ಜೀವಬೆದರಿಕೆಯೊಡ್ಡಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 "ದೇವಸ್ಥಾನ ನಿರ್ಮಾಣಕ್ಕೆ ಅಡ್ಡ ಯಾವನಾದ್ರೂ ಬಂದ್ರೆ, ಕೈಯೋ-ಕಾಲು ಕಡಿಸ್ತೇನೆ. ಅಷ್ಟೆ... ಒಳ್ಳೆ ಮಾತಲ್ಲಿ ಹೇಳಿದ್ರೆ ಆಗಲ್ಲ ನಿಮಗೆ... ಅವನ್ಯಾವನೋ ಫಾರೆಸ್ಟ್ ದಿನೇಶ ಅಂತೆ. ಕಾಡಿನಲ್ಲಿರುವ ಮರ ಉಳಿಸೋ ಮೊದಲು ಅಂತ ಹೇಳು.. ಅವನೇನೂ ಪಾಳೇಗಾರನಾ... ಅವರ (ಗ್ರಾಮಸ್ಥರ) ಸುದ್ದಿಗೆ ಹೋಗಬ್ಯಾಡ ಅಂತ ಹೇಳು ಅವನಿಗೆ...!!" ಎಂದು ದೂರವಾಣಿ ಮೂಲಕ ಹಿರಿಯ ಅರಣ್ಯ ಅಧಿಕಾರಿಯ ಜೊತೆಯೇ ಜೀವ ಬೆದರಿಕೆ ಹಾಕಿದ್ದಾರೆ.

ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಹಾಕುತ್ತಿರುವ ಧಮಕಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಮತ್ತೊಂದೆಡೆ ವೈರಲ್ ಆಗಿರುವ ಈ ವೀಡಿಯೋ ಬಗ್ಗೆ ಶಾಸಕ ಬಿ.ಕೆ.ಸಂಗಮೇಶ್‌ರವರು ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಾಗೆಯೇ ಅರಣ್ಯ ಇಲಾಖೆ ಅಧಿಕಾರಿಯೂ ಇಲಾಖೆಯ ಮೇಲಾಧಿಕಾರಿಗಾಗಲಿ ಅಥವಾ ಪೊಲೀಸರಿಗಾಗಲಿ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.

ಏನಿದು ವೀಡಿಯೊ?: ಲಭ್ಯ ಮಾಹಿತಿ ಅನುಸಾರ, ಕಳೆದ ಎರಡ್ಮೂರು ದಿನಗಳ ಹಿಂದೆ ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಕೂಡ್ಲಿಗೆರೆ ಗ್ರಾಮದ ಅರಣ್ಯ ಜಾಗದಲ್ಲಿ ಗ್ರಾಮಸ್ಥರು ದೇವಾಲಯವೊಂದನ್ನು ನಿರ್ಮಿಸಲು ನಿರ್ಧರಿಸಿದ್ದರು. ಅದರಂತೆ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ನಿರ್ಮಾಣ ಕಾರ್ಯಕ್ಕೆ ಚಾಲನೆಯನ್ನೂ ನೀಡಿದ್ದರು.

ದೇವಾಲಯ ನಿರ್ಮಾಣಕ್ಕೆ ಕೂಡ್ಲಿಗೆರೆ ಭಾಗದ ಅರಣ್ಯಾಧಿಕಾರಿ ದಿನೇಶ್ ಎಂಬವರು ಅಡ್ಡಿಪಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ಈ ಕುರಿತಂತೆ ಮೊಬೈಲ್ ಪೋನ್ ಮೂಲಕ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರೊಂದಿಗೆ ಮಾತನಾಡುತ್ತಿದ್ದರು.

ಸುಮಾರು 1.18 ನಿಮಿಷದ ವಿವಾದಿತ ವೀಡಿಯೊ ಕ್ಲಿಪ್ಪಿಂಗ್‌ನಲ್ಲಿ ಱದೇವಾಲಯ ನಿರ್ಮಾಣಕ್ಕೆ ಡಿಎಫ್‌ಒ ಅನುಮತಿ ಕೊಟ್ಟಾಗಿದೆ. ಎಸಿಎಫ್ ಹೇಳಾಗಿದೆ. ನೀ ಹೇಳಿದ್ದಿಯಾ. ಏನ್ 1 ಚದುರ ಅಷ್ಟೆ. ಅರ್ಜಿ ಕೂಡ ಕೊಟ್ಟಾಗಿದೆ. ಇವತ್ತು ಪೂಜೆ ಮಾಡಿದ್ದೇವೆ, ಮತ್ತೆ ಯಾರು ಅಡ್ಡ ಬರಬಾರದು. ಅಡ್ಡ ಯಾವನಾದ್ರೂ ಬಂದ್ರೆ ಕೈಯೋ, ಕಾಲು ಕಡಿಸ್ತೇನೆ ಅಷ್ಟೆ. ಒಳ್ಳೆ ಮಾತಲ್ಲಿ ಹೇಳಿದ್ರೆ ಆಗಲ್ಲ ನಿಮಗೆ. ದೇವಾಲಯ ಕೆಲಸ ಸ್ಟಾರ್ಟ್ ಮಾಡ್ತಾರೆ. ಯಾರು ಅಡ್ಡ ಬರಬಾರದು.

"ಅವನ್ಯಾವನೋ ಫಾರೆಸ್ಟ್ ದಿನೇಶ ಅಂತೆ. ಕಾಡಿನಲ್ಲಿರುವ ಮರ ಉಳಿಸೋ ಮೊದಲು ಅಂತ ಹೇಳು. ಇಲ್ಲಿ ಪಾಪ ಜನರು ದೇವಸ್ಥಾನ ಮಾಡೋಕೆ ಹೋದ್ರೆ ಅಡ್ಡ ಬರ್ತಾನಂತೆ. ಜನರಿಗೆ ಪೋನ್ ಮಾಡಿದ್ನಂತೆ. ಅವನೇನೂ ಪಾಳೇಗಾರನಾ. ಒಂದು ಚದುರ ದೇವಸ್ಥಾನ ಕಟ್ತಾರೆ. ಅವರ ಸುದ್ದಿಗೆ ಹೋಗಬ್ಯಾಡ ಅಂತ ಹೇಳು ಅವನಿಗೆ ಅಷ್ಟೆ...!"ಎಂದು ಶಾಸಕರು ಮಾತನಾಡುತ್ತಾ ಹಿರಿಯ ಅಧಿಕಾರಿಯ ಬಳಿಯೇ ರಣ್ಯಾಧಿಕಾರಿ ದಿನೇಶ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ವೊಡ್ಡಿರುವುದು ಕಂಡುಬಂರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News