ಮರೆತನೆಂದರೆ ಮರೆಯಲಿ ಹ್ಯಾಂಗ... : ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರ ಗುನುಗು

Update: 2019-01-06 16:53 GMT

ಧಾರವಾಡ, ಜ.6: ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ತಂದ ಕುವೆಂಪುರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ನಡೆದ ಮೊಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ 8 ನೆ ಜ್ಞಾನಪೀಠ ಪಡೆದಿರುವ ಕಂಬಾರರ ಸರ್ವಾಧ್ಯಕ್ಷತೆಯಲ್ಲಿ ನಡೆದ 84 ನೆ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ತೆರೆಕಂಡಿದ್ದು, ಮರೆತನೆಂದರೆ ಮರೆಯಲಿ ಹ್ಯಾಂಗ ಎಂದು ಕಂಬಾರರ ಕವಿತೆಯನ್ನು ಸಾಹಿತ್ಯ ಅಭಿಮಾನಿಗಳು ಗುನುಗುವಂತೆ ಮಾಡಿದೆ.

ಧಾರವಾಡ ಸಹೃದಯರ ನಾಡು. ಈ ಊರಲ್ಲಿ ನಿಂತು ಕಲ್ಲು ಎಸೆದರೆ ಕವಿಗಳ ಮನೆಯಲ್ಲಿ ಬೀಳುತ್ತದೆ ಎಂಬ ಮಾತು ಸುಮ್ಮನೇ ಬಂದಿಲ್ಲ ಎಂಬ ಮಾತುಗಳು ಸಮ್ಮೇಳನಕ್ಕೆ ಸಾಕ್ಷಿಯಾದ ಲಕ್ಷಾಂತರ ಸಾಹಿತ್ಯ ಅಭಿಮಾನಿಗಳು ಪುನರುಚ್ಛರಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

 ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಂಎ ಪದವಿಯನ್ನು ಪ್ರಥಮ ಧರ್ಜೆಯಲ್ಲಿ ಉತ್ತೀರ್ಣರಾದ ರಾ.ಹ.ದೇಶಪಾಂಡೆಯನ್ನು ಊರ ತುಂಬಾ ಮೆರವಣಿಗೆ ನಡೆಸಿ ಸಂಭ್ರಮಿಸಿದ ಬೀಡು ಧಾರವಾಡ. ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರು ನಡೆದಾಡಿದ ನೆಲವಿದು. ಕಾದಂಬರಿಗಳನ್ನು ತಲೆಯ ಮೇಳೆ ಹೊತ್ತು ಕನ್ನಡವನ್ನು ಪಸರಿಸಿದ ಗಳಗನಾಥರು ಸುತ್ತಾಡಿದ ದಾರಿಗಳು ಧಾರವಾಡದ ಬೀದಿ ಬೀದಿಗಳಲ್ಲಿ ಒಂದೊಂದು ಕತೆಯನ್ನು ಹೇಳುತ್ತಿವೆ.

ಖ್ಯಾತ ಸಂಶೋಧಕ ಡಾ.ಜಿ.ಎಸ್.ಆಮೂರ, ಬೆಳಕಿನ ಕವಿ ಡಾ.ಚನ್ನವೀರ ಕಣವಿ, ಕೋಮುವಾದಿಗಳ ಗುಂಡಿಗೆ ಬಲಿಯಾದ ಖ್ಯಾತ ಸಂಶೋಧಕ, ಹಿರಿಯ ಚಿಂತಕ ಡಾ.ಎಂ.ಎಂ.ಕಲಬುರ್ಗಿ, ಶ್ರೇಷ್ಟ ಸಂಶೋಧಕ ಡಾ.ಗಿರಡ್ಡಿ ಗೋವಿಂದರಾಜ, ಇಂದೂ ನಮ್ಮೊಂದಿಗೆ ಯುವ ತರುಣರಂತೆ ಅಡ್ಡಾಡುವ ಪ್ರೊ.ಚಂಪಾ, ರಾಷ್ಟ್ರ ಮಟ್ಟದಲ್ಲಿ ಕನ್ನಡದ ಅಸ್ಮಿತೆಯನ್ನು ಹರಡಿದ ನಾಟಕಕಾರ ಗಿರೀಶ್ ಕಾರ್ನಾಡ್ ಧಾರವಾಡದ ಅಸ್ಮಿತೆಯನ್ನು ನೆನಪಿಸುತ್ತದೆ. ಈ ಮೂರು ದಿನಗಳ ಸಮ್ಮೇಳನ ಎಲ್ಲರನ್ನೂ ಮರು ನೆನಪಿಸಿದೆ. ಕನ್ನಡದ ಜನಪದದ ಗಟ್ಟಿ ಕಸುವಿನ ಪ್ರತಿಭೆ ಕಂಬಾರರು. ಅವರು ಪಕ್ಕದ ಜಿಲ್ಲೆ ಬೆಳಗಾವಿನವರು ಆದರೂ ಧಾರವಾಡಕ್ಕೂ ಅವರಿಗೂ ಬಿಡಿಸಲಾಗದಂತಹ ಸಂಬಂಧವಿದೆ.

ಐತಿಹಾಸಿಕ ಘಟನೆಗಳ ತವರೂರು: 16 ನೆ ಶತಮಾನದಲ್ಲಿ ಕಾಣಿಸಿಕೊಂಡ ಧಾರವಾಡವು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಪ್ರಸ್ತುತ ಬೆಳಗಾವಿ ಪ್ರಾದೇಶಿಕ ವಿಭಾಗವಾಗಿದೆ. ಆದರೆ, ಬ್ರಿಟಿಷರ ಕಾಲದಲ್ಲಿ ಧಾರವಾಡವೇ ಪ್ರಾದೇಶಿಕ ಕೇಂದ್ರವಾಗಿತ್ತು. ಇಲ್ಲಿಂದಲೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಆಡಳಿತ ನಡೆಯುತ್ತಿತ್ತು.

ವೀರರಾಣಿ ಕಿತ್ತೂರು ಚೆನ್ನಮ್ಮರನ್ನು ಬ್ರಿಟಿಷರು ಸೆರೆ ಹಿಡಿದಾಗ ಬಂಧಿಸಿಟ್ಟಿದ್ದು ಇಂದಿನ ಜಿಲ್ಲಾಧಿಕಾರಿಗಳ ನಿವಾಸದಲ್ಲಿದ್ದು, ಇಂದಿಗೂ ಅದನ್ನು ರಕ್ಷಿಸಿಡಲಾಗಿದೆ. ಸಾಹಿತ್ಯ ಪರಿಷತ್ತಿನಿಂಗಲೂ ಹಳೆಯದಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ರಾ.ಹ.ದೇಶಪಾಂಡೆ ಆಸಕ್ತಿಯ ಫಲವಾಗಿ ಆರಂಭವಾಗಿದ್ದೂ ಧಾರವಾಡದಲ್ಲಿ. ಅದು ಇಲ್ಲಿ ಎಲ್ಲರ ಮನೆಯ ಮಾತಾಗಿತ್ತು. ಇದೀಗ ಐದು ದಶಕಗಳಿಂದ ಸಂಘವನ್ನು ಹಿರಿಯ ಹೋರಾಟಗಾರ ಹಾಗೂ ಗಾಂಧೀವಾದಿ ಡಾ.ಪಾಟೀಲ ಪುಟ್ಟಪ್ಪರವರು ಮುನ್ನಡೆಸುತ್ತಿದ್ದಾರೆ.ಧಾರವಾಡದ ಕೀರ್ತಿ ಶಿಖರ ಅಷ್ಟಕ್ಕೆ ಅಂತ್ಯವಾಗಲ್ಲ. ರಾಜಕೀಯವಾಗಿಯೂ ಇಲ್ಲಿ ಪ್ರಮುಖ ಪಾತ್ರವಿದೆ. ಆಜಾದ್ ಹಿಂದ್ ಫೌಜ್ ಮೂಲಕ ಗೆರಿಲ್ಲಾ ಮಾದರಿಯ ಹೋರಾಟ ಮಾಡಿದ ನೇತಾಜಿ ಸುಭಾಷ್ ಚಂದ್ರಬೋಸ್ ಇಲ್ಲಿನ ಕಡಪಾ ಮೈದಾನದಲ್ಲಿ 1940 ರಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದ್ದರು. ಅದರ ಸವಿನೆನಪಿಗಾಗಿ ಆ ರಸ್ತೆಗೆ ನೇತಾಜಿ ಸುಭಾಷ್ ಚಂದ್ರಬೋಸ್ ಹೆಸರಿಡಲಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಹಿರಿಯ ರಾಜಕೀಯ ನೇತಾರ ಜಯಪ್ರಕಾಶ ನಾರಾಯಣ ಹಾಗೂ ಅಂದಿನ ಪ್ರಧಾನಿ ಇಂದಿರಾಗಾಂಧಿ ಧಾರವಾಡಕ್ಕೆ ಭೇಟಿ ನೀಡಿದ್ದರು.

ವರಕವಿ ಬೇಂದ್ರೆ, ಶಂಭಾ ಜೋಶಿ, ವಿ.ಕೃ.ಗೋಕಾಕ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಸೇರಿದಂತೆ ಹಲವರು ಧಾರವಾಡದ ನೆಲದಲ್ಲಿ ನಡೆದಾಡಿದ್ದಾರೆ. ಮೂರು ದಿನಗಳ ಕಾಲ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಧಾರವಾಡ ಸಾಹಿತ್ಯ, ಐತಿಹಾಸಿಕ ಹಾಗೂ ರಾಜಕೀಯ ವಿಷಯಗಳು ಬಹುಚರ್ಚಿತವಾಗಿದ್ದವು. ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಸಕ್ತರು ಪುಸ್ತಕ ಮಳಿಗೆಗಳಿಗೆ ತೆರಳಿ ಧಾರವಾಡಕ್ಕೆ ಸಂಬಂಧಿಸಿದ ಸಾಹಿತಿ, ರಾಜಕಾರಣಿಗಳ ಪುಸ್ತಕಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದು. ಒಟ್ಟಾರೆಯಾಗಿ ಸಾಹಿತ್ಯ ಸಮ್ಮೇಳನ ಉತ್ತರ ಕರ್ನಾಟಕದ ಸಾಹಿತ್ಯಿಕ ಮೆರಗನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News