ಚಿಕ್ಕಮಗಳೂರು, ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ: ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಜ.7: ವಿವಿಧ ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಕರೆ ನೀಡಿರುವ ಭಾರತ ಬಂದ್‍ಗೆ ಚಿಕ್ಕಮಗಳೂರು ಜಿಲ್ಲಾದ್ಯಂತ ಎಲ್ಲ ಕಾರ್ಮಿಕ ಸಂಘಟನೆಗಳೂಂದಿಗೆ ಸೇರಿ ಆಟೋ, ಟ್ಯಾಕ್ಸಿ, ಲಾರಿ ಮಾಲಕರ, ಚಾಲಕರ ಸಂಘಟನೆಗಳೂ ಬಂದ್‍ಗೆ ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಲಿದೆ.
ಆದರೆ ಕೊಡಗು ಜಿಲ್ಲೆಯಲ್ಲಿ ಬೆಂಬಲ ದೊರೆಯುವ ಸಾಧ್ಯತೆ ಕ್ಷೀಣಿಸಿದೆ. ಖಾಸಗಿ ಬಸ್‍ಗಳು ಎಂದಿನಂತೆ ಸಂಚರಿಸಲಿದ್ದು, ಶಾಲಾ ಕಾಲೇಜುಗಳು ಕೂಡ ತೆರೆದಿರುತ್ತವೆ. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜ.8 ಮತ್ತು 9 ರಂದು 48 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದ್ದು, ಕೊಡಗಿನಲ್ಲೂ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಸಹಕರಿಸುವಂತೆ ಮನವಿ ಮಾಡಿವೆ. ಆದರೆ ಬಂದ್‍ನಂತಹ ಪ್ರಕ್ರಿಯೆಗಳಿಂದ ಕೊಡಗು ಹೊರಗುಳಿಯಲಿದ್ದು, ಕಾರ್ಮಿಕರ ಪ್ರತಿಭಟನೆಗಳಷ್ಟೇ ಮೂರು ತಾಲೂಕುಗಳಲ್ಲಿ ನಡೆಯಲಿದೆ. ಅಲ್ಲದೇ, ಶಾಲಾ ಕಾಲೇಜುಗಳಿಗೆ ರಜೆ ಇಲ್ಲವೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸ್ಪಷ್ಟಪಡಿಸಿದ್ದಾರೆ.
ಬಂದ್‍ಗೆ ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕೆಎಸ್ಸಾರ್ಟಿಸಿ ಸಂಸ್ಥೆಯು ಕಾರ್ಮಿಕ ಸಂಘಟನೆ ರಾಜ್ಯಾದ್ಯಂತ ಬಂದ್‍ಗೆ ಬೆಂಬಲ ಸೂಚಿಸಿರುವುದರಿಂದ ಜಿಲ್ಲೆಯಲ್ಲಿ ಮಂಗಳವಾರದ ಹಾಗೂ ಬುಧವಾರ ಸರಕಾರಿ ಬಸ್‍ಗಳ ಓಡಾಟ ಇರುವುದಿಲ್ಲ. ಆದರೆ ಜಿಲ್ಲೆಯ ಖಾಸಗಿ ಬಸ್‍ಗಳ ಮಾಲಕರ ಸಂಘ ಬಂದ್‍ಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಸರಕಾರಿ ಬಸ್‍ಗಳ ಸೇವೆ ಸ್ಥಗಿತಗೊಂಡಿರುವುದರಿಂದ ಎರಡು ದಿನಗಳಕಾಲ ಸಾರ್ವಜನಿಕರು, ಪ್ರಯಾಣಿಕರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಶಾಲಾ ಕಾಲೇಜುಗಳಿಗೆ ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸೋಮವಾರ ಘೋಷಿಸಿದ್ದಾರೆ. ಸರಕಾರಿ ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯಾಣಿಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸುಗಮ ಪ್ರಯಾಣಕ್ಕೆ ಸಮಸ್ಯೆ ಎದುರಾಗಿದೆ. ಬಂದ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಎಲ್ಲ ಮಡಿಕಲ್ ಶಾಲ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ ಖಾಸಗಿ ಆಸ್ಪತ್ರೆಗಳು ಈ ಸಂಬಂಧ ನಿರ್ಧಾರ ಪ್ರಕಟಿಸಿಲ್ಲ. ಬಹುತೇಕ ಖಾಸಗಿ, ಸರಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೋಟೆಲ್‍ಗಳೂ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಇನ್ನು ಭಾರತ್ ಬಂದ್‍ಗೆ ಜಿಲ್ಲೆಯ ಲಾರಿ, ಆಟೊ, ಟ್ಯಾಕ್ಸಿ ಮಾಲಕರು, ಚಾಲಕರ ಸಂಘ ಬೆಂಬಲ ನೀಡಿರುವುದರಿಂದ ಎರಡು ದಿನಗಳ ಕಾಲ ಲಾರಿ, ಆಟೊ, ಟ್ಯಾಕ್ಸಿಗಳು ರಸ್ತೆಗಿಳಿಯುವುದಿಲ್ಲ. ಇದರೊಂದಿಗೆ ಜಿಲ್ಲೆಯ ರೈತಸಂಘ ಹಾಗೂ ಹಸಿರು ಸೇನೆ, ಎಲ್‍ಐಸಿ ಸಂಘ, ಬ್ಯಾಂಕ್ ¸ನೌಕರರ ಸಂಘ, ಆಶಾ ಕಾರ್ಯಕರ್ತೆಯರ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಸಾರಿಗೆ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ತೋಟ ಕಾರ್ಮಿಕರ ಸಂಘ ಮತ್ತಿತರರ ಸಂಘಟನೆಗಳು ಬಂದ್‍ಗೆ ಬೆಂಬಲ ಘೋಷಿಸಿವೆ.
ಕೊಡಗು: ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿರುವ ಎರಡು ದಿನಗಳ ಮುಷ್ಕರಕ್ಕೆ ಕೊಡಗು ಜಿಲ್ಲೆಯಲ್ಲಿ ಬೆಂಬಲ ದೊರೆಯುವ ಸಾಧ್ಯತೆ ಕ್ಷೀಣಿಸಿದೆ. ಖಾಸಗಿ ಬಸ್‍ಗಳು ಎಂದಿನಂತೆ ಸಂಚರಿಸಲಿದ್ದು, ಶಾಲಾ ಕಾಲೇಜುಗಳು ಕೂಡ ತೆರೆದಿರುತ್ತವೆ.
ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ಇಲ್ಲವೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸ್ಪಷ್ಟಪಡಿಸಿದ್ದಾರೆ. ಖಾಸಗಿ ಬಸ್‍ಗಳ ಸಂಚಾರ ಎಂದಿನಂತೆ ಇರಲಿದೆ ಎಂದು ಕೊಡಗು ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ. ಆಟೋ ರಿಕ್ಷಾಗಳು ಎಂದಿನಂತೆ ಓಡಾಡಲಿವೆ ಎಂದು ಆಟೋ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಡಿ.ಹೆಚ್.ಮೇದಪ್ಪ ಹೇಳಿದ್ದಾರೆ. ಜಿಲ್ಲೆಯ ವರ್ತಕರು ಕೂಡ ಮುಷ್ಕರದ ಬಗ್ಗೆ ನಿರಾಸಕ್ತಿ ತೋರಿದ್ದಾರೆ.
ಸಹಕರಿಸಲು ಮನವಿ
ದೇಶದ ಹತ್ತು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜ.8 ಮತ್ತು 9 ರಂದು ಕರೆ ನೀಡಿರುವ ರಾಷ್ಟ್ರ ವ್ಯಾಪ್ತಿ ಮುಷ್ಕರದ ಕರೆಯಂತೆ ಕೊಡಗು ಜಿಲ್ಲೆಯಲ್ಲಿರುವ ವಿವಿಧ ಕಾರ್ಮಿಕ ಸಂಘಟನೆಗಳು ಕೂಡ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ ಎಂದು ಜಂಟಿ ಕ್ರಿಯಾ ಸಮಿತಿಯ ಪ್ರಮುಖರು ಹಾಗೂ ಅಂಗನವಾಡಿ ಸಂಘಟನೆಯ ಮುಖಂಡರಾದ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಹೊಸ ಹಾಗೂ ಸಭ್ಯ ಉದ್ಯೋಗಗಳನ್ನು ನಿರುದ್ಯೋಗಿಗಳಿಗೆ ನೀಡಬೇಕು, 7ನೇ ವೇತನ ಆಯೋಗ ಜಾರಿಗೊಳಿಸಿರುವ ಕನಿಷ್ಠ ವೇತನ ರೂ.18 ಸಾವಿರ ನೀಡಬೇಕು, ಕಾರ್ಮಿಕ ಕಾನೂನುಗಳನ್ನು ಮೊಟಕುಗೊಳಿಸುವ ಕ್ರಮವನ್ನು ಕೈಬಿಡಬೇಕು, ಗುತ್ತಿಗೆ ಆಧಾರದ ನೌಕರರನ್ನು ಖಾಯಂಗೊಳಿಸಬೇಕು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಬಾರದು, ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಮತ್ತು ಭದ್ರತೆ ನೀಡಬೇಕು, ಕೃಷಿ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆಗೆ ಪರಿಹಾರ ಸೂಚಿಸಲು ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಸೇರಿದಂತೆ ಕಾರ್ಮಿಕರು ಹಾಗೂ ಜನಸಾಮಾನ್ಯರ ಪರವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎರಡು ದಿನಗಳ ಮುಷ್ಕರವನ್ನು ನಡೆಸಲಾಗುತ್ತಿದೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ
ಜ.8 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಗಾಂಧಿ ಮೈದಾನದ ಬಳಿ ಪ್ರತಿಭಟನೆಯನ್ನು ನಡೆಸಲಾಗುವುದು. ವಿರಾಜಪೇಟೆಯಲ್ಲಿ ಮಾರಿಯಮ್ಮ ದೇವಾಲಯದ ಬಳಿ ಮತ್ತು ಸೋಮವಾರಪೇಟೆಯಲ್ಲೂ ಜಂಟಿಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಲಿದೆ. ಜ.9 ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿಯ ಚೌಕಿ ವೃತ್ತ (ಇಂದಿರಾ ಗಾಂಧಿ ವೃತ್ತ) ದಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ.
ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಕಾರ್ಪೋರೇಟ್ ವಲಯದ ನೌಕರರು, ಬಿಎಸ್‍ಎನ್‍ಎಲ್, ಎಲ್‍ಐಸಿ, ಕೆ.ಎಸ್.ಆರ್.ಟಿ.ಸಿ ಪ್ಲಾಂಟೇಷನ್ ಕಾರ್ಮಿಕರು, ಬ್ಯಾಂಕ್ ಸಂಘಟನೆಗಳು, ಅಂಗನವಾಡಿ, ಆಶಾ, ಬಿಸಿಯೂಟ, ಗ್ರಂಥಾಲಯ, ಗ್ರಾಮ ಪಂ., ಆಸ್ಪತ್ರೆ ನೌಕರರು, ಹಮಾಲಿ ಸಂಘಟನೆ, ತಲೆಹೊರೆ ಕಾರ್ಮಿಕರು, ರೈತಾಪಿ ವರ್ಗದವರು, ಕೃಷಿ ಕಾರ್ಮಿಕರು, ಅಂಚೆ ನೌಕರರ ಸಂಘಟನೆಗಳು, ಕಟ್ಟಡ ಕಾರ್ಮಿಕರು, ವಾಹನ ಚಾಲಕರು ಅಲ್ಲದೆ, ಅಸಂಘಟಿತ ವಲಯದ ಕಾರ್ಮಿಕರು, ನಿರುದ್ಯೋಗಿ ಯುವ ಸಮೂಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ ಎಂದು ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಕಾರ್ಮಿಕರು ಹಾಗೂ ಜನಸಾಮಾನ್ಯರ ಸಂಕಷ್ಟಗಳ ಪರಿಹಾರಕ್ಕಾಗಿ ದೇಶ ವ್ಯಾಪಿ ಕರೆ ನೀಡಿರುವ ಮುಷ್ಕರಕ್ಕೆ ಕೊಡಗಿನ ಜನತೆ ಕೂಡ ಬೆಂಬಲ ನೀಡಿ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.