×
Ad

ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಎರಡು ಟಿಎಂಸಿ ನೀರು ಬಿಡುಗಡೆ: ಡಿ.ಕೆ.ಶಿವಕುಮಾರ್

Update: 2019-01-07 20:41 IST

ಬೆಂಗಳೂರು, ಜ.7: ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸಲು ಎರಡು ಟಿಎಂಸಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ಹಂಚಿಕೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹೇಮಾವತಿ ಜಲಾಶಯದಿಂದ ನೀರು ಹಂಚಿಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ತುಮಕೂರು ಜಿಲ್ಲೆಗೆ ನೀರಿನ ಕೊರತೆ ಆಗುತ್ತಿದೆ. ಅಲ್ಲದೆ, ಅಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದು ಕಂಡು ಬಂದಿದೆ. ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಕಾನೂನು ಚೌಕಟ್ಟಿನಲ್ಲಿ ಹಂಚಿಕೆಯಾಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ತುಮಕೂರಿಗೆ 23 ಟಿಎಂಸಿ ನೀರು ಬಿಡಲಾಗಿದೆ. 15 ದಿನಗಳಲ್ಲಿ 2 ಟಿಎಂಸಿ ನೀರು ತುಮಕೂರಿಗೆ ಬಿಡಬೇಕಿದೆ. ನೀರು ಕೆನಾಲ್‌ನಲ್ಲಿ ಪೊಲಾಗುತ್ತಿದೆ. ಹಾಗಾಗಿ ಕೆನಾಲ್‌ಗಳನ್ನು ಆಧುನೀಕರಣಗೊಳಿಸಬೇಕಿದೆ. ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಯಬೇಕು. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಶಿವಕುಮಾರ್ ತಿಳಿಸಿದರು.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ತುಮಕೂರು ಜಿಲ್ಲೆಯ ನಾಲೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಬಿಡುತ್ತಿಲ್ಲ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಮಾಡಿರುವ ಆರೋಪ ನಿರಾಧಾರವಾದದ್ದು ಎಂದರು. ನಾವು ಅಧಿಕಾರಕ್ಕೆ ಬಂದ ನಂತರ ಕಾನೂನು ಬದ್ಧವಾಗಿ ಇದುವರೆಗೆ 23 ಟಿಎಂಸಿ ನೀರು ಹರಿಸಲಾಗಿದೆ. ಬಾಕಿ ಇರುವ ಎರಡು ಟಿಎಂಸಿ ನೀರನ್ನೂ ಕೊಡುತ್ತೇವೆ. ಇನ್ನೆರಡು ತಿಂಗಳಲ್ಲಿ ಬೇಸಿಗೆ ಇದೆ, ಬಾಕಿ ನೀರನ್ನು ಈಗಲಾದರೂ ಪಡೆದುಕೊಳ್ಳಿ ಆನಂತರವಾದರೂ ಪಡೆದುಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ ಎಂದು ಅವರು ಹೇಳಿದರು.

ಅಗತ್ಯವಿದ್ದಲ್ಲಿ ಹೇಮಾವತಿ ಅಣೆಕಟ್ಟಿನ ಕೀಲಿ ಕೈಯನ್ನು ಬಸವರಾಜು ಅವರೇ ಇಟ್ಟುಕೊಳ್ಳಲಿ. ಯಾವಾಗ ಬೇಕೋ ಆಗ ನೀರು ತೆಗೆದುಕೊಳ್ಳಲಿ. ನಂತರ, ಕುಡಿಯುವ ನೀರಿಗೆ ತೊಂದರೆ ಎದುರಾದರೇ ಅದಕ್ಕೆ ನಾವು ಜವಾಬ್ದಾರರಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ನೀರಿನ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಹಾಸನ ಜಿಲ್ಲೆಯ ಹಾಗೂ ತುಮಕೂರು ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News