ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರ ಕುಮಾರಸ್ವಾಮಿ ಜೊತೆ ಚರ್ಚೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-01-07 16:19 GMT

ಹುಬ್ಬಳ್ಳಿ, ಜ. 7: ನಿಗಮ ಮಂಡಳಿ ಅಧ್ಯಕ್ಷರ ನೇಮಕ ಸಂಬಂಧ ಕೆಲ ಹೆಸರುಗಳನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಕೆಲ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಏಕೆ ಸಹಿ ಹಾಕಿಲ್ಲ ಎಂಬ ಬಗ್ಗೆ ವಿವರಣೆ ಪಡೆದುಕೊಳ್ಳುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ರಾಜೀನಾಮೆ ಏಕೆ: ವಿಧಾನಸೌಧದಲ್ಲಿ ಸಚಿವರ ಕಚೇರಿಯ ಟೈಪಿಸ್ಟ್ ಬಳಿ ಹಣ ಪತ್ತೆಯಾದ ಬಗ್ಗೆ ತನಿಖೆ ನಡೆಯುತ್ತಿದ್ದು, ಹಣ ಯಾರಿಗೆ ಸೇರಿದ್ದು ಎಂಬುದು ಇನ್ನೂ ಗೊತ್ತಾಗಿಲ್ಲ. ಹೀಗಿರುವಾಗ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿಯವರು ರಾಜೀನಾಮೆ ಏಕೆ ನೀಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಚಿವ ಪುಟ್ಟರಂಗಶೆಟ್ಟಿಯವರ ಬಳಿ ಏನಾದರೂ ಹಣ ಸಿಕ್ಕಿದೆಯಾ? ಹಣ ಸಿಗದೆಯೇ ಸಚಿವರು ರಾಜೀನಾಮೆ ಏಕೆ ನೀಡಬೇಕೆಂದು ಹೇಳುವುದು ಸರಿಯಲ್ಲ. ತನಿಖೆ ಬಗ್ಗೆ ಬಿಜೆಪಿಯವರಿಗೆ ಭರವಸೆ ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸ್ಪಷ್ಟತೆ ಅಗತ್ಯ: ಮಕ್ಕಳ ಶಿಕ್ಷಣ ಮಾಧ್ಯಮ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಆಯಾ ರಾಜ್ಯದವರಿಗೆ ಕೊಡುವುದು ಅತ್ಯಗತ್ಯ. ಮಕ್ಕಳ ಶಿಕ್ಷಣ ಮಾಧ್ಯಮ ಆಯ್ಕೆಮಾಡಿಕೊಳ್ಳುವುದು ಅವರ ತಂದೆ-ತಾಯಿಗೆ ಬಿಟ್ಟದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಕನ್ನಡ ಭಾಷೆಗೆ ಮಾತ್ರ ಸಂಬಂಧಿಸಿದ್ದಲ್ಲ. ದೇಶದ 22 ಭಾಷೆಗಳಿಗೆ ಸಂಬಂಧಿಸಿದ್ದು, ಈ ನಿಟ್ಟಿನಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಿ ಪ್ರಧಾನಿ ತೀರ್ಮಾನ ಕೈಕೊಳ್ಳಬೇಕು ಎಂದ ಅವರು, ಭಾಷಾ ಮಾಧ್ಯಮದ ಬಗ್ಗೆ ಸ್ಪಷ್ಟಣೆ ಅಗತ್ಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News