ಭಾರತ್ ಬಂದ್ ಕರೆ ಹಿನ್ನೆಲೆ: ಮೈಸೂರಿನಲ್ಲಿ ವ್ಯಾಪಕ ಬೆಂಬಲ

Update: 2019-01-07 17:39 GMT

ಮೈಸೂರು,ಜ.7: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ನಾಳೆಯಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ಹೂಡಿರುವ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಜ.8 ಮತ್ತು 9 ರಂದು ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ಆಟೋ, ಕೆಎಸ್ ಆರ್.ಟಿಸಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕೆಎಸ್‍ಆರ್‍ಟಿಸಿ ನೌಕರರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ.

ಹೀಗಾಗಿ ಮೈಸೂರಿನಲ್ಲಿ ಕೆಎಸ್‍ಆರ್‍ಟಿಸಿ ಗ್ರಾಮಾಂತರ, ನಗರ ವಿಭಾಗದ ಬಸ್ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ. ಬಿಇಎಂಎಲ್ ಸೇರಿದಂತೆ ಬಹುತೇಕ ಎಲ್ಲಾ ಕಾರ್ಖಾನೆಗಳ ನೌಕರರೂ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ಆಟೋ, ಟ್ಯಾಕ್ಸಿ ಚಾಲಕರು ಬೆಂಬಲ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಲಾರಿ ಮಾಲಕರ ಸಂಘ ಭಾರತ್ ಬಂದ್ ಗೆ ನೈತಿಕ ಬೆಂಬಲ ನೀಡಿದ್ದು, ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ. ಎಂದಿನಂತೆ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸಲಿವೆ. ಹಾಲು, ಪತ್ರಿಕೆ, ದಿನ ಬಳಕೆ ವಸ್ತುಗಳ ಸರಬರಾಜಿನಲ್ಲಿ ಇಲ್ಲ ವ್ಯತ್ಯಯ ಉಂಟಾಗಲಿದ್ದು, ಮಲ್ಟಿಫೆಕ್ಸ್, ಚಲನಚಿತ್ರ ಮಂದಿರಗಳಲ್ಲಿ ಎಂದಿನಂತೆ ಪ್ರದರ್ಶನವಿರುತ್ತದೆ. ಬಂದ್ ನಿಂದ ಪ್ರವಾಸಿ ತಾಣವಾಗಿರುವ ಕಾರಣಕ್ಕೆ ಹೋಟೆಲ್ ಉದ್ಯಮಕ್ಕೆ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.

ದಸಂಸ ಬೆಂಬಲ; ಬಂದ್‍ಗೆ ದಲಿತ ಸಂಘರ್ಷ ಸಮಿತಿಯ ಎಲ್ಲಾ ಬಣಗಳು ಬೆಂಬಲ ಸೂಚಿಸಿವೆ. ಈ ಕುರಿತು ಹೇಳಿಕೆ ನೀಡಿದ ದಲಿತಂ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕಾರ್ಮಿಕ ಸಂಘಟನೆಗಳು ನೀಡಿರುವ ಮುಷ್ಕರಕ್ಕೆ ನಮ್ಮ ಬೆಂಬಲವಿದ್ದು, ಕಾರ್ಮಿಕ ಸಂಘಟನೆಗಳೊಡಗೂಡಿ ನಾವು ಸಹ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News