ದಾವಣಗೆರೆ: ಸಚಿವ ಪುಟ್ಟರಂಗಶೆಟ್ಟಿ ವಜಾಗೊಳಿಸಲು ಒತ್ತಾಯಿಸಿ ಬಿಜೆಪಿ ಧರಣಿ

Update: 2019-01-07 18:23 GMT

ದಾವಣಗೆರೆ,ಜ.7: ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ಆಶ್ರಯದಲ್ಲಿ ಕಾರ್ಯಕರ್ತರು ಧರಣಿ ನಡೆಸಿದರು.  

ಬಿಜೆಪಿ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿಗೆವರೆಗೆ ಪ್ರತಿಭಟನೆ ನಡೆಸಿ, ಎಸಿ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು. 
ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರವೀಂದ್ರನಾಥ, ವಿಧಾನಸೌಧದಲ್ಲಿ ದಂಧೆ ತಡೆಯಲು ಅಧಿಕಾರಕ್ಕೆ ಬಂದಿರುವುದಾಗಿ ಸಿಎಂ ಕುಮಾರಸ್ವಾಮಿ ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರು. ಆದರೆ, ಅದೇ ಕುಮಾರಸ್ವಾಮಿ ಸಂಪುಟದ ಸಚಿವ ಪುಟ್ಟರಂಗಶೆಟ್ಟಿ ಭ್ರಷ್ಟಾಚಾರದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ತಕ್ಷಣವೇ ಸಂಪುಟದಿಂದ ವಜಾ ಮಾಡಲಿ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಆಪ್ತ ಸಹಾಯಕನ ಬಳಿ 25.76 ಲಕ್ಷ ರು. ಸಮೇತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಶಕ್ತಿ ಸೌಧವು ಹೇಗೆ ದುರ್ಬಳಕೆಯಾಗುತ್ತಿದೆಯೆಂಬುದಕ್ಕೆ ಇದರಿಂದ ಸಾಬೀತಾಗಿದೆ. ಈ ತಕ್ಷಣವೇ ಭ್ರಷ್ಟಮಂತ್ರಿಯನ್ನು ಸಂಪುಟದಿಂದ ವಜಾ ಮಾಡಿ, ಸಿಎಂ ತಾವು ಭ್ರಷ್ಟಾಚಾರ ವಿರೋಧಿ ಎಂಬುದನ್ನು ಸಾಬೀತುಪಡಿಸಲಿ ಎಂದರು. 

ವಿಪ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಕಳೆದ 2 ತಿಂಗಳಿನಿಂದಲೂ ತೈಲ ಬೆಲೆ ಇಳಿಕೆಯಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ, ಬಡ, ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ಬರೆ ಎಳೆದಿದೆ. ಕೇಂದ್ರದ ವಿರುದ್ಧ ಹಿಂದೆ ತೈಲ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಸರ್ಕಾರವೇ ಈಗ ತೈಲ ಬೆಲೆ ಹೆಚ್ಚಿಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ತೈಲ ಬೆಲೆ ಏರಿಕೆ ವಿರುದ್ಧ ಭಾರತ ಬಂದ್ ನಡೆಸಿದ್ದ ಮೈತ್ರಿ ಸರ್ಕಾರ ಇದೀಗ ಪೆಟ್ರೋಲ್ ಮೇಲೆ ಶೇ.21ರಿಂದ ಶೇ.32ರಷ್ಟು, ಡೀಸೆಲ್ ಮೇಲಿನ ತೆರಿಗೆ ಶೇ.17ರಿಂದ ಶೇ.28.75ರಷ್ಟು ಹೆಚ್ಚಿಸಿ ಜನ ಸಾಮಾನ್ಯರಿಗೆ ಆರ್ಥಿಕ ಹೊರೆ ಹೇರಿದೆ. ಸಂವಿಧಾನಾತ್ಮಕ ಹುದ್ದೆ ಮುಖ್ಯಸ್ಥರಾದ ರಾಜ್ಯಪಾಲರು ತಕ್ಷಣವೇ ಸಿಎಂ ಕುಮಾರಸ್ವಾಮಿ ತಕ್ಷಣವೇ ನಿರ್ದೇಶನ ನೀಡಿ, ತೈಲ ಬೆಲೆಗಳ ಮೇಲೆ ವಿಧಿಸಿದ ಹೆಚ್ಚಿನ ತೆರಿಗೆ ಕಡಿಮೆ ಮಾಡಿಸಲಿ. ಈ ಬಗ್ಗೆ ರಾಜ್ಯಪಾಲರು ತಕ್ಷಣವೇ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪಕ್ಷದ ಮುಖಂಡರಾದ ಎಚ್.ಎನ್.ಶಿವಕುಮಾರ, ಶಾಬನೂರು ಎಚ್.ಆರ್. ಲಿಂಗರಾಜ, ಎನ್.ರಾಜಶೇಖರ, ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಎಲ್.ಡಿ.ಗೋಣೆಪ್ಪ, ಧನಂಜಯ ಕಡ್ಲೇಬಾಳ್, ಉಮೇಶ ಪಾಟೀಲ, ಟಿಂಕರ್ ಮಂಜಣ್ಣ, ಬಿ.ಎಸ್.ಜಗದೀಶ, ಪಿ.ಸಿ. ಶ್ರೀನಿವಾಸ, ಎ.ವೈ.ಪ್ರಕಾಶ, ಪ್ರಭು ಕಲ್ಬುರ್ಗಿ, ಎಚ್.ಎಂ.ರುದ್ರಮುನಿಸ್ವಾಮಿ, ರಮೇಶ ನಾಯ್ಕ, ಕೆ. ಹೇಮಂತಕುಮಾರ, ಶಿವರಾಜ ಪಾಟೀಲ್, ಬಿ.ಎಸ್.ಬಸವರಾಜ, ಪಿ.ಎಸ್.ಜಯಣ್ಣ, ವೀರೇಶ, ಚೇತುಬಾಯಿ ಹಲವರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News