ಶಿವರಾಂ ಕಾರಂತ ಬಡಾವಣೆ ಅಧಿಸೂಚನೆ ರದ್ಧತಿಗೆ ಆಗ್ರಹಿಸಿ ಧರಣಿ
ಬೆಂಗಳೂರು, ಜ.8: ಶಿವರಾಂ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಹೊರಡಿಸಿರುವ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸಹಕಾರ ನಗರದಿಂದ ಮೌರ್ಯ ವೃತ್ತದವರೆಗೆ ಬೈಕ್ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.
ಸಹಕಾರನಗರದಿಂದ ನಡೆದ ಬೈಕ್ ರ್ಯಾಲಿಯ ನಂತರ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆದ ಸಮಾವೇಶದಲ್ಲಿ ಸುಪ್ರೀಂ ಕೋರ್ಟ್ ಆದೇಶಗಳನ್ನು ಮುಂದಿಟ್ಟುಕೊಂಡು ಶಿವರಾಂ ಕಾರಂತ ಬಡಾವಣೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆ ನಿರ್ಮಾಣದಿಂದ ಸಾವಿರಾರು ಜನರು ಬೀದಿಗೆ ಬೀಳುತ್ತಾರೆ. ಸರಕಾರ ಮಧ್ಯಪ್ರವೇಶಿಸಿ ಯೋಜನೆಯನ್ನು ಕೈಬಿಡಬೇಕು. ಬಿಡಿಎ ಹಠಕ್ಕೆ ಬಿದ್ದು ಬಡಾವಣೆ ನಿರ್ಮಾಣಕ್ಕೆ ಮುಂದಾದರೆ ತೀವ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ಬಿಡಿಎ ಬಡಾವಣೆ ನಿರ್ಮಾಣಕ್ಕೆ 17 ಗ್ರಾಮಗಳ 3546 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಹೊರಡಿಸಿ ಐದು ವರ್ಷ ಕಳೆದರು ಭೂ ಸ್ವಾಧೀನಕ್ಕೆ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದರು.
ಕ್ರಮ ಕೈಗೊಳ್ಳದೇ ಇರುವುದಕ್ಕೆ ಭೂ ಮಾಲಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ರಕಾರದ ಅಧಿಸೂಚನೆಯನ್ನು ವಜಾಗೊಳಿಸಿದೆ. ಆದರೆ, ರಾಜಕಾರಣಿಗಳು 703 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸಿಕೊಂಡು ಯೋಜನೆಯನ್ನು ಬುಡಮೇಲು ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 1356 ಎಕರೆ ಭೂಮಿಗೆ ಎನ್‌ಒಸಿ ನೀಡುವ ಮೂಲಕ 4500 ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು.
ಭೂಮಿ ಮಾಲಕರು ಹೈಕೋರ್ಟ್ ಆದೇಶದಂತೆ ಬಿಡಿಎ ಅನುಮತಿ ಪಡೆದು ಭೂಪರಿವರ್ತನೆ ಮಾಡಿ ಆಯಾ ಇಲಾಖೆಗಳಿಗೆ ತೆರಿಗೆಯನ್ನು ಪಾವತಿಸಿದೆ. ಬಡಾವಣೆಗೆ ನಕಾಶೆ ಮಾಡಿ ನೂರಾರು ಅಪಾರ್ಟ್‌ಮೆಂಟ್‌ಗಳನ್ನು ಹಾಗೂ 25 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಭೂಮಿ ಉಳಿಸಿಕೊಂಡಿರುವ ರೈತರು ತೋಟಗಾರಿಕೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಸುಪ್ರೀಂ ಕೋರ್ಟ್‌ನಿಂದ ಮರೆಮಾಚಿದ್ದರಿಂದ ನ್ಯಾಯಾಲಯವು ಭೂಸ್ವಾಧೀನ ಅಧಿಸೂಚನೆಯಂತೆ 3546 ಎಕರೆಯನ್ನು ಬಿಡಿಎ ಬಿಟ್ಟುಕೊಡುವಂತೆ ಆದೇಶ ಹೊರಡಿಸಿದ್ದು, ಅದನ್ನು ಸರಕಾರ ಬಿಡಿಸಿಕೊಡಬೇಕು ಎಂದು ಒತ್ತಾಯಿಸಿದರು.