×
Ad

ದೇವರಕೊಲ್ಲಿಯಲ್ಲಿ ಸರಣಿ ಕಳ್ಳತನ : ಪೊಲೀಸ್ ತನಿಖೆ ಚುರುಕು

Update: 2019-01-08 22:44 IST

ಮಡಿಕೇರಿ, ಜ.8 : ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿಯಿಂದ ಮದೆನಾಡುವರೆಗೆ ಸರಣಿ ಕಳ್ಳತನ ನಡೆದಿದೆ. ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದ ಯುವಕನೋರ್ವ ದೇವರಕೊಲ್ಲಿ ಶ್ರೀಚಾಮುಂಡೇಶ್ವರಿ ದೇವಾಲಯದ ಬೀಗ ಒಡೆದು ಒಳನುಗ್ಗಿ ಹುಂಡಿ ಒಡೆಯಲು ವಿಫಲ ಯತ್ನ ನಡೆಸಿದ್ದಾನೆ. ಕೈಯಲ್ಲಿ ತಲವಾರ್ ಹಿಡಿದು ದೇವಾಲಯದ ಗರ್ಭ ಗುಡಿಯ ಒಳಗೆ ಅಮೂಲ್ಯ ವಸ್ತುಗಳಿಗಾಗಿ ತಡಕಾಡುತ್ತಿರುವ ದೃಶ್ಯಾವಳಿಗಳು ದೇವಾಲಯ ದಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ.

ದೇವಾಲಯದ ಮುಂಭಾಗದ  ಹೆದ್ದಾರಿಯಲ್ಲಿ ಡಾಮರು ಹಾಕುವ ಕಾರ್ಯ ನಡೆಯುತ್ತಿದ್ದು ಅಲ್ಲಿ ನಿಲ್ಲಿಸಲಾಗಿದ್ದ ಮಿನಿ ಲಾರಿಯ ಬ್ಯಾಟರಿಯನ್ನು ಕೂಡ ಕಳವಾಗಿದೆ. ಆ ಬಳಿಕ ಜೋಡುಪಾಲದ ರಸ್ತೆ ಬದಿಯ ಅಂಗಡಿಗೆ ನುಗ್ಗಿರುವ ಕಳ್ಳರು 1 ಸಾವಿರದ ನಗದು, ಇನ್ನಿತರ ವಸ್ತುಗಳ ಕಳವು ಮಾಡಿದ್ದಾರೆ. ಮಾತ್ರವಲ್ಲದೆ ಮದೆನಾಡು ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮಾರುತಿ ಓಮ್ನಿ ಕಾರಿನ 4 ಚಕ್ರಗಳನ್ನು ಕದಿಯಲಾಗಿದ್ದು, ಹೆದ್ದಾರಿ ಬದಿಯ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ.

ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಒಂಟಿ ಮನೆಗಳು, ಅಂಗಡಿ ಮಳಿಗೆಗಳಿದ್ದು ಸರಣಿ ಕಳ್ಳತನ ಪ್ರಕರಣದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News