ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರಿಗೆ 18 ಸಾವಿರ ರೂ. ವೇತನ ನಿಗದಿಗೆ ಒತ್ತಾಯ

Update: 2019-01-08 17:22 GMT

ಚಿಕ್ಕಮಗಳೂರು, ಜ.8: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಸಂಘಟನೆಯ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಧರಣಿ ನಡೆಸಿದರು.

ನಗರದ ಬೋಳರಾಮೇಶ್ವರ ದೇವಾಲಯದ ಆವರಣದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಸಂಘಟನೆಯ ಜಿಲ್ಲಾ ಸಂಚಾಲಕ ಶಿವಪ್ರಕಾಶ್, ಕೇಂದ್ರ ಸರಕಾರ ತನ್ನ ಬಿಗು ಧೋರಣೆಯನ್ನು ಕೈಬಿಟ್ಟು ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಕಾಳಸಂತೆ ವ್ಯಾಪಾರವನ್ನು ನಿಷೇಧಿಸಬೇಕು, ಆಶಾ ಕಾರ್ಯಕರ್ತೆರಿಗೆ ಕನಿಷ್ಠ ವೇತನ ನಿಗದಿಪಡಿಸಿ, ಸರಕಾರಿ ನೌಕರರಿಗೆ ನೀಡುವ ಇತರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಹೊಸ ಉದ್ಯೋಗ ಸೃಷ್ಟಿಸಬೇಕು, ಎಲ್ಲಾ ಮೂಲ ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಕಾರ್ಮಿಕ ಪರ ಕಾನೂನುಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ತಾರಾಕೃಷ್ಣ ಮಾತನಾಡಿ, ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಎಲ್ಲಾ ಕಾರ್ಮಿಕರಿಗೂ 18 ಸಾವಿರ ರೂ.ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದ ಅವರು, ರಾಜ್ಯ- ರಾಷ್ಟ್ರೀಯ ಸಾರ್ವಜನಿಕ ವಲಯ ಉದ್ಯಮಗಳ ಶೇರು ಮಾರಾಟ ಮತ್ತು ಬಂಡವಾಳ ಹಿಂಪಡೆತವನ್ನು ನಿಲ್ಲಿಸಬೇಕು, ಗುತ್ತಿಗೆ ಕಾರ್ಮಿಕರಿಗೂ ಸಮಾನ ವೇತನ ಜಾರಿಗೊಳಿಸಬೇಕು, ರೈಲ್ವೆ, ವಿಮೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಧರಣಿ ಬಳಿಕ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಮೈನಾ, ತಾಲೂಕು ಅಧ್ಯಕ್ಷೆ ಜ್ಯೋತಿ, ಕಾರ್ಯದರ್ಶಿ ಗೀತಾ, ಕೊಪ್ಪಾ ತಾಲೂಕು ಅಧ್ಯಕ್ಷೆ ಗೀತಾ, ಕಡೂರು ತಾಲೂಕು ಅಧ್ಯಕ್ಷೆ ರೇಷ್ಮಾ, ಮಂಜುಳಾ, ಯಶೋಧ, ಪ್ರತಿಮಾ, ಹೇಮಲತಾ ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News