×
Ad

ಕೊಡಗಿನಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ : ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Update: 2019-01-08 22:56 IST

ಮಡಿಕೇರಿ, ಜ.8 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ದೇಶವ್ಯಾಪಿ 48 ಗಂಟೆಗಳ ಮುಷ್ಕರಕ್ಕೆ ಕೊಡಗು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಂಟಿ ಕ್ರಿಯಾಸಮಿತಿಗೆ ಒಳಪಟ್ಟ ಕೆಲವು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಮತ್ತು ಬೆರಳೆಣಿಕೆಯ ಕಾರ್ಮಿಕರು ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಧರಣಿ ನಡೆಸಿರುವುದನ್ನು ಬಿಟ್ಟರೆ ಉಳಿದಂತೆ ಜನಜೀವನ ಎಂದಿನಂತಿತ್ತು. ಕೊಡಗಿನಲ್ಲಿ ಇದೀಗ ಕಾಫಿ ಮತ್ತು ಭತ್ತದ ಕೊಯ್ಲಿನ ಸಮಯವಾಗಿದ್ದರಿಂದ ಕಾರ್ಮಿಕರು ಕೂಡಾ ಮುಷ್ಕರಕ್ಕೆ ಹೆಚ್ಚಿನ ಬೆಂಬಲ ನೀಡಲಿಲ್ಲ.

ಜಿಲ್ಲಾ ಕೇಂದ್ರವಾದ ಮಡಿಕೇರಿಯ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ   ಜಂಟಿಕ್ರಿಯಾ ಸಮಿತಿಯ ಪ್ರಮುಖರಾದ ಟಿ.ಪಿ.ರಮೇಶ್, ಎನ್.ಡಿ.ಕುಟ್ಟಪ್ಪನ್, ಹೆಚ್.ಆರ್.ರಮೇಶ್ ಅವರುಗಳ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು, ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು ಧರಣಿ ಸತ್ಯಾಗ್ರಹ ನಡೆಸಿದರು. ಈ ಸಂದರ್ಭ ಪ್ರತಿಭಟನಾಕಾರನ್ನುದ್ದೇಶಿಸಿದ ಜಂಟಿ ಕ್ರಿಯಾ ಸಮಿತಿ ಮುಖಂಡ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿದರು.

ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳು, ಆಟೋಗಳು ಸೇರಿದಂತೆ ವಾಹನ ಸಂಚಾರ ಎಂದಿನಂತಿತ್ತು. ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದ್ದರೆ, ಸರಕಾರಿ ಶಾಲೆ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳ ಓಡಾಟ ಮಾತ್ರ ವಿರಳವಾಗಿತ್ತು. ಬ್ಯಾಂಕ್, ಸರಕಾರಿ ಕಚೇರಿಗಳು ತೆರದಿದ್ದವಾದರೂ, ಸಿಬ್ಬಂದಿಗಳ ಕೊರತೆ ಕಂಡು ಬಂದಿತು. ಮಡಿಕೇರಿಯ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಪೋಸ್ಟ್‍ಮ್ಯಾನ್, ಎಂಟಿಎಸ್ ಯೂನಿಯನ್ ಸದಸ್ಯರು ಕೆಲಕಾಲ ಪ್ರತಿಭಟನೆ ನಡೆಸುವ ಮೂಲಕ ಜಂಟಿ ಕ್ರಿಯಾ ಸಮಿತಿಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವೀರಾಜಪೇಟೆಯಲ್ಲೂ ಮುಷ್ಕರ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೆಲವು ನೀತಿಯನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವೀರಾಜಪೇಟೆ ತಾಲೂಕಿನ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ತಾಲೂಕು ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

ತಾಲೂಕು ಮಟ್ಟದ ಪ್ರತಿಭಟನೆಯ ಅಂಗವಾಗಿ ತಾಲೂಕಿನ ಕಟ್ಟಡ ಕಾರ್ಮಿಕರು, ತೋಟ ಕಾರ್ಮಿಕರು, ಬಿ.ಎಸ್.ಎನ್.ಎಲ್,  ಎಲ್.ಐ.ಸಿ, ಹಾಗೂ ಜೆ.ಸಿ.ಟಿ.ಯು ನೇತೃತ್ವದಲ್ಲಿ ಪಟ್ಟಣದ ತೆಲುಗರ ಬೀದಿಯಿಂದ ಜೈನರ ಬೀದಿ, ದೊಡ್ಡಟ್ಟಿ ಚೌಕಿ, ಮುಖ್ಯ ರಸ್ತೆಗಾಗಿ ಗಡಿಯಾರ ಕಂಬದಿಂದ ಮೂಲಕ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನೆಯ ನೇತೃತ್ವವನ್ನು ಜೆ.ಸಿ.ಟಿ.ಯು. ಸಂಘಟನೆಯ ಎ.ಸಿ.ಸಾಬು, ಜನರಲ್ ವರ್ಕರ್ಸ್ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಮಹದೇವ, ಸಿ.ಐ.ಟಿ.ಯು.ನ ಜಿಲ್ಲಾ ಅಧ್ಯಕ್ಷ ಐ.ಆರ್.ದುರ್ಗಪ್ರಸಾದ್, ಬಿಸಿಯೂಟ ನೌಕರರ ಜಿಲ್ಲಾ ಕಾರ್ಯದರ್ಶಿ ಕುಸುಮ,  ತಾಲೂಕು ಅಧ್ಯಕ್ಷೆ ನ್ಯಾನ್ಸಿ,  ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಹರೀಶ್,  ಜೆ.ಸಿ.ಟಿ.ಯು. ನಾಗರಾಜು,  ಕಟ್ಟಡ ಕಾರ್ಮಿಕ ಸಂಘಟನೆಯ ಎಂ.ಕೆ.ಮೋಹನ್ ಹಾಗೂ ಶಾಲಿ ಪೌಲಸ್,  ತೋಟ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜು, ಬಿ.ಎಸ್.ಎನ್.ಎಲ್. ನೌಕರರ ಸಂಘದ ನಾಯಕ್ ಅವರುಗಳು ವಹಿಸಿದ್ದು,  ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಸಿದ್ದಾಪುರ, ತಿತಿಮತಿ, ಪಾಲಿಬೆಟ್ಟ, ಹುದಿಕೇರಿ, ಕಾಕೋಟುಪರಂಬು, ಹೆಗ್ಗಳ, ಹಾಗೂ ತಾಲೂಕಿನ ಇತರ ಎಸ್ಟೇಟ್‍ ಗಳಿಂದಲೂ ನೂರಾರು ಸಂಖ್ಯೆಯ ಕಾರ್ಮಿಕರು ಭಾಗವಹಿಸಿದ್ದರು. ಸರ್ಕಲ್ ಇನ್ಸ್‍ಪೆಕ್ಟರ್ ಎನ್.ಕುಮಾರ್ ಆರಾಧ್ಯ, ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರುಗಳು ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.  ಪಟ್ಟಣದಲ್ಲಿ ಅಂಗಡಿ, ಹೋಟೆಲ್‍ಗಳು   ಬ್ಯಾಂಕ್, ಕಛೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.   ಬಸ್ ಹಾಗೂ ಇತರ ವಾಹನಗಳ ಓಡಾಟವೂ ಎಂದಿನಂತಿತ್ತು.

ಸುಂಟಿಕೊಪ್ಪ

ಕಾರ್ಮಿಕ  ಸಂಘಟನೆಗಳು ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ದೇಶವ್ಯಾಪ್ತಿ ಕರೆ ನೀಡಿದ್ದ 48ಗಂಟೆಗಳ ಮುಷ್ಕರಕ್ಕೆ  ಕಾರ್ಮಿಕರೇ ಹೆಚ್ಚಾಗಿರುವ ಸುಂಟಿಕೊಪ್ಪ ವಿಭಾಗದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ.

ಅಂಗಡಿ ಮುಂಗಟ್ಟುಗಳು ತೆರೆದಿದ್ದು ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.   ಖಾಸಗಿ ಬಸ್‍ಗಳ ಸಂಚಾರ ಎಂದಿನಂತಿತ್ತು. ರಾಷ್ಟ್ರೀಕೃತ ಬ್ಯಾಂಕು ಗಳು ತೆರೆಯದೆ ಮುಷ್ಕರಕ್ಕೆ ಸಾಥ್ ನೀಡಿದ್ದವು. ಕೆಎಸ್‍ಆರ್‍ಟಿಸಿ ಎಕ್ಸ್‍ಪ್ರೆಸ್ ಬಸ್ಸುಗಳ ಸಂಚಾರ ವಿರಳವಾಗಿದ್ದು, ಸ್ಥಳೀಯ ಬಸ್ಸುಗಳ ಓಡಾಟ ಎಂದಿನಂತಿತ್ತು.

ಶಾಲಾ, ಕಾಲೇಜು, ನಾಡುಕಛೇರಿ, ಪಶುವೈಧ್ಯಕೀಯ ಇಲಾಖೆ ಕಛೇರಿ ಎಂದಿನಂತೆ  ಕರ್ತವ್ಯ ನಿರ್ವಹಿಸಿದ್ದರೂ ಸಾರ್ವಜನಿಕರು ಕಡಿಮೆ ಸಂಖ್ಯೆ ಯಲ್ಲಿದ್ದುದರಿಂದ ಸಿಬ್ಬಂದಿಗಳು ಆರಾಮವಾಗಿ ಕೆಲಸ ನಿರ್ವಹಿಸಿದರು.

‘ಬಂದ್’ ಕರೆಯಿಂದ ಹೆದರಿ ಸುಂಟಿಕೊಪ್ಪ ಪಟ್ಟಣದಲ್ಲಿ ಜನರ ಓಡಾಟ ವಿರಳವಾಗಿತ್ತು. ವರ್ತಕರಿಗೆ ವ್ಯಾಪಾರ ಕಡಿಮೆಯಾಗಿದ್ದರಿಂದ ಮುಷ್ಕರದ ಬಿಸಿ ತಟ್ಟಿದಂತಿತ್ತು. ಮುಷ್ಕರದ ಎರಡನೇ ದಿನವಾದ ಬುಧವಾರ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News