"ಪ್ರಧಾನಿ ಮೋದಿ ಪರದೇಶಗಳ, ಬಂಡವಾಳಿಗರ ಪ್ರೇಮಿ"

Update: 2019-01-08 17:30 GMT

ಚಿಕ್ಕಮಗಳೂರು, ಜ.8: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮಹಾ ಮುಷ್ಕರಕ್ಕೆ ಎಐಟಿಯುಸಿ, ಐಎನ್‍ಟಿಯುಸಿ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಂಗಳವಾರ ಧರಣಿ ನಡೆಸಿದವು.

ನಗರದ ತಾಲೂಕು ಕಚೇರಿಯಿಂದ ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್ ವೃತ್ತದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಗುಣಶೇಖರನ್, ಕೇಂದ್ರ ಆಡಳಿತರೂಢಾ ನರೇಂದ್ರಮೋದಿ ಸರಕಾರ ತನ್ನ ಅಧಿಕಾರಾವಧಿಯ 4 ವರ್ಷ 8 ತಿಂಗಳಲ್ಲಿ  ದುಡಿಯುವ ವರ್ಗ ಕಾರ್ಮಿಕರು, ಬಡವರ ಹಕ್ಕುಗಳನ್ನು ಧಮನ ಮಾಡುತ್ತಿದೆ. ಬಂಡವಾಳಶಾಯಿಗಳ ಪರವಾದ ಆರ್ಥಿಕ ನೀತಿಗಳನ್ನು ಜಾರಿ ಮಾಡುವ ಮೂಲಕ ಮೋದಿ ಸರಕಾರ ಕಾರ್ಮಿಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಅಗತ್ಯವಸ್ತುಗಳ ಬೆಲೆ ಹೆಚ್ಚು ಮಾಡಿರುವ ಕೇಂದ್ರ ಸರಕಾರ ವಿವಿಧ ಸಂಸ್ಥೆಗಳು, ಸರಕಾರಿ, ಅರೆ ಸರಕಾರಿ, ಕಾರ್ಖಾನೆಗಳ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸೌಲಭ್ಯ ಗಳನ್ನು ನೀಡುವಲ್ಲಿ ವಿಫಲವಾಗಿದ್ದು, ಕಾರ್ಮಿಕರ ವಿರುದ್ಧವಾಗಿರುವ ಕಾನೂನುಗಳನ್ನು ಜಾರಿ ಮಾಡುತ್ತಿದೆ. ಈ ಕಾರಣಕ್ಕೆ ಕಾರ್ಮಿಕ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಬೇಕಾಯಿತು ಎಂದರು.

ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ದುಡಿಯುವ ವರ್ಗದ ಕಾರ್ಮಿಕರಿಗೆ ಭದ್ರತೆಯಿಲ್ಲ, ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿ ಕೊಳ್ಳಲಾಗುತ್ತಿದೆ. ಕಾರ್ಮಿಕ ವಿರೋಧಿ ಆರ್ಥಿಕ ನೀತಿ ಜಾರಿಯಿಂದಾಗಿ ದೇಶದ ಸಂಘಟಿತ, ಅಸಂಘಟಿತ ಕಾರ್ಮಿಕರ ಬದುದು ಬವಣೆಯಾಗುತ್ತಿದೆ. ದೇಶದ ಕೈಗಾರಿಕಾ ನೀತಿ ಹಾಗೂ ದೇಶದ ಕಾನೂನುಗಳೂ ಸಹ ಕಾರ್ಮಿಕರ ವಿರೋಧಿಯಾಗಿರುವುದರಿಂದ ದೇಶದ ವಿವಿಧ 12 ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದರು.

ಆಡಳಿತಾರೂಢ ಕೇಂದ್ರ ಸರಕಾರ ಜನಪರ ಆಡಳಿತ ನಿಡುವುದನ್ನು ಬಿಟ್ಟು ಮಸೀದಿ ಮಂದಿರದ ಹೆಸರಿನಲ್ಲಿ ರಾಜಕಾರಣ ಮಾಡುವ ಮೂಲಕ ದೇಶದ ಜನರ ಐಕ್ಯತೆಯನ್ನು ಒಡೆದು ಆಳುವ ನಿಟ್ಟಿನಲ್ಲಿ ಕಾನೂನು ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಅಧಿಕಾರದಾಸೆಯಿಂದ ಎಲ್ಲೆಡೆ ಕೋಮು ಗಲಬೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಈ ಮೂಲಕ ಕಾರ್ಮಿಕರು, ಬಡವರು ನೈಜ ಸಮಸ್ಯೆಗಳತ್ತ ಧ್ವನಿಯತ್ತದಂತೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಿಪಿಐನ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಮಾತನಾಡಿ, ಕಾರ್ಮಿಕ ಸಂಘಟನೆಗಳು ಕೇಂದ್ರ ಸರಕಾರ ಕಾರ್ಮಿಕ ನೀತಿಯನ್ನು ವಿರೋಧಿಸಿ ತಮ್ಮ ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ತೊಡಗಿಕೊಳ್ಳುವಂತೆ ಕರೆ ನೀಡಿದೆಯೇ ಹೊರತು ಎಲ್ಲಿಯೂ ಭಾರತ್ ಬಂದ್ ಎಂದು ಹೇಳಿರಲಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಇದೊಂದು ಕೈಗಾರಿಕಾ ಚಳವಳಿಯಾಗಿದ್ದು, ಕಾರ್ಮಿಕ ನೀತಿ ವಿರೋಧಿಸಿ ನಡೆಯುತ್ತಿರುವ ಮಹಾ ಮುಷ್ಕರ ಎಂದರು.

ಕಳೆದ ಬಾರಿಯ ಚುನಾವಣಾ ಪೂರ್ವದಲ್ಲಿ ಕಪ್ಪು ಹಣ ದೇಶಕ್ಕೆ ಮರಳಿ ತರುವುದು, ಯುವಜನತೆಗೆ ಉದ್ಯೋಗ ಸೃಷ್ಟಿಯೂ ಸೇರಿದಂತೆ ಹಲವು ಭರವಸೆ ಗಳನ್ನು ನೀಡಿದ ನರೇಂದ್ರಮೋದಿ ತಮ್ಮ ಆಡಳಿತಾವಧಿಯಲ್ಲಿ ಹೊರ ದೇಶಗಳ ಪ್ರವಾಸ ಕೈಗೊಳ್ಳುವ ಮೂಲಕ ಪರದೇಶಗಳ, ಬಂಡವಾಳಗಾರರ ಪ್ರೇಮಿಯಾಗಿದ್ದಾರೆ ಎಂದು ಕುಟುಕಿದರು.

ಸಹ್ಯಾದ್ರಿ ಪ್ಲಾಂಟೇಷನ್ ಜನರಲ್ ವಕ್ರ್ಸ್‍ರ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಒಡೆಯರ್ ಮಾತನಾಡಿ, ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆರಿಗೆ ಸೇವಾಭದ್ರತೆಯನ್ನು ನೀಡದೇ ದುಡಿಸಿಕೊಳ್ಳಲಾಗುತ್ತಿದೆ ಅವರಿಗೆ 14ಸಾವಿರ ಕನಿಷ್ಠ ವೇತನವನ್ನು ಕೇಂದ್ರ ಸರಕಾರ ಕೂಡಲೆ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು.

ಸಿಪಿಐ ನಾಯಕಿ ರಾಧಾಸುಂದರೇಶ್ ಮಾತನಾಡಿ, ಕೇಂದ್ರ ಸರಕಾರ ಕರಾಳ ಕಾನೂನುಗಳು ಕಾರ್ಮಿಕ ವರ್ಗವನ್ನು ನಲುಗುವಂತೆ ಮಾಡಿದೆ. ಬಲಿದಾನಗಳ ಮೂಲಕ ಜಾರಿಯಾದ ಹಲವು ಕಾರ್ಮಿಕ ಕಾನೂನುಗಳನ್ನು ಮೋದಿ ಸರಕಾರ ತಿದ್ದುಪಡಿ ಮಾಡಲು ಮುಂದಾಗಿದೆ ಎಂದರು. ಕಟ್ಟಡ ಕಾರ್ಮಿಕರ ಸಂಘಟನೆಯ ರಘು, ಬಿಸಿಯೂಟ ಕಾರ್ಯಕರ್ತೆಯರು ಮತ್ತು ಗ್ರಾ.ಪಂ. ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್, ಕಾರ್ಮಿಕ ಸಂಘಟನೆಗಳ ಮುಖಂಡರಾದ ಮಾಣಿಕ್ಯ, ಎ.ಪಿ ಸೆಲ್ವಂ, ಮುನಿಯಾಂಡಿ, ಪುಷ್ಪರಾಜ್, ಅಂಗನವಾಡಿ ಕಾರ್ಯಕರ್ತೆಯರ ಬಲ್ಕಿಸ್‍ಭಾನು, ವನಜಾಕ್ಷಿ, ಮಂಗಳ, ಗ್ರೆಟ್ಟಾ ಫರ್ನಾಂಡಿಸ್ ಸೇರಿದಂತೆ ನೂರಾರು ಮಂದಿ ಧರಣಿಯಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News