ಮಿಶೆಲ್ ‘ಮಾಮಾ’ನಿಂದಾಗಿ ರಫೇಲ್ ಒಪ್ಪಂದ ನಿಂತುಹೋಯಿತೇ: ಕಾಂಗ್ರೆಸ್‌ಗೆ ಮೋದಿ ಪ್ರಶ್ನೆ

Update: 2019-01-09 14:14 GMT

ಹೊಸದಿಲ್ಲಿ, ಜ.9: ರಫೇಲ್ ಯುದ್ಧವಿಮಾನ ಒಪ್ಪಂದ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಕುಟುಂಬದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ಮಿಶೆಲ್ ‘ಮಾಮಾ’ನಿಂದಾಗಿ ಒಪ್ಪಂದ ನಿಂತುಹೋಯಿತೇ ಎಂದು ಲೇವಡಿ ಮಾಡಿದ್ದಾರೆ.

ರಫೇಲ್ ಸಂಸ್ಥೆಯ ಪ್ರತಿಸ್ಪರ್ಧಿ ಯುರೋಫೈಟರ್ ಪರವಾಗಿ ಕ್ರಿಶ್ಚಿಯನ್ ಮಿಶೆಲ್ (ರಫೇಲ್ ಒಪ್ಪಂದದ ಮಧ್ಯವರ್ತಿ)ಲಾಬಿ ನಡೆಸಿದ್ದರು ಎಂಬ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಟೀಕಾಪ್ರಹಾರ ನಡೆಸಿರುವ ಮೋದಿ, ಮಿಶೆಲ್ ಮಾಮಾ ಬೇರೆ ಕಂಪೆನಿಗಳ ಪರ ಲಾಬಿ ನಡೆಸಿದ್ದರು. ಇದೀಗ, ಅನವಶ್ಯಕ ಗದ್ದಲ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರು ಮಿಶೆಲ್ ಮಾಮಾನೊಂದಿಗೆ ತಮಗಿರುವ ಸಂಬಂಧದ ಕುರಿತು ವಿವರಣೆ ನೀಡಬೇಕಿದೆ. ಯಾಕೆ ಅವರು ವಿವರಣೆ ನೀಡಬಾರದು, ಯಾಕೆ ಈ ಬಗ್ಗೆ ಅವರನ್ನು ಚೌಕಿದಾರ್ ಕೇಳಬಾರದು ಎಂದು ಪ್ರಶ್ನಿಸಿದರು.

 ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕಮಿಷನ್ ಪಡೆಯುವ ಇಂತಹ ವ್ಯಕ್ತಿಗಳ ಸ್ನೇಹಿತರು ಚೌಕಿದಾರನನ್ನು ಹೆದರಿಸಬಹುದು ಎಂದು ಕನಸು ಕಾಣುತ್ತಿದ್ದಾರೆ. ಆದರೆ ಈ ಸ್ವಚ್ಛತಾ ಕಾರ್ಯ ಮುಂದುವರಿಯಲಿದೆ ಮತ್ತು ಈ ಚೌಕಿದಾರ ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News