12 ದೇಶಗಳ ರಾಜತಾಂತ್ರಿಕರನ್ನು ‘ಉಯಿಘರ್’ ಮುಸ್ಲಿಮರ ರಾಜ್ಯಕ್ಕೆ ಕರೆದೊಯ್ದ ಚೀನಾ

Update: 2019-01-09 14:18 GMT

ಬೀಜಿಂಗ್, ಜ. 9: ಭಾರತ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ವಾಸಿಸುವ 12 ದೇಶಗಳ ರಾಜತಾಂತ್ರಿಕರನ್ನು ಚೀನಾ ಇತ್ತೀಚೆಗೆ ಕ್ಸಿನ್‌ಜಿಯಾಂಗ್ ರಾಜ್ಯಕ್ಕೆ ಕರೆದುಕೊಂಡು ಹೋಗಿದೆ. ಈ ರಾಜ್ಯದಲ್ಲಿ ಉಯಿಘರ್ ಮುಸ್ಲಿಮ್ ಸಮುದಾಯದ ಸದಸ್ಯರನ್ನು ‘ಪುನಶ್ಚೇತನ’ ಶಿಬಿರಗಳಲ್ಲಿ ಇಡಲಾಗಿದೆ.

ಕ್ಸಿನ್‌ಜಿಯಾಂಗ್ ರಾಜ್ಯದಲ್ಲಿ ಆಗಿರುವ ‘ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ’ಯನ್ನು ಹೊರಜಗತ್ತಿಗೆ ತೋರಿಸುವ ಚೀನಾದ ಯೋಜನೆಯ ಭಾಗವಾಗಿ, ಪ್ರತ್ಯೇಕವಾಗಿ ಕೆಲವು ವಿದೇಶಿ ಪತ್ರಕರ್ತರನ್ನೂ ಕರೆದುಕೊಂಡು ಹೋಗಲಾಗಿತ್ತು.

ಕ್ಸಿನ್‌ಜಿಯಾಂಗ್ ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಸಲಾಗುತ್ತಿದೆಯೆನ್ನಲಾದ ದಮನಕಾರಿ ಕ್ರಮಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಈ ಕ್ರಮಕ್ಕೆ ಮುಂದಾಗಿದೆ.

ಉಯಿಘರ್ ಮುಸ್ಲಿಮರ ಸಾರಾಸಗಟು ಮಾನವಹಕ್ಕು ಉಲ್ಲಂಘನೆಗಳ ಬಗ್ಗೆ ತಿಂಗಳುಗಳ ಕಾಲ ಮೌನದಿಂದ ಇದ್ದ ಬಳಿಕ, ಇಂಥ ‘ಪುನಶ್ಚೇತನ’ ಶಿಬಿರಗಳು ಇರುವುದನ್ನು ಚೀನಾ ಕಳೆದ ವರ್ಷದ ಕೊನೆಯಲ್ಲಿ ಒಪ್ಪಿಕೊಂಡಿತ್ತು. ಇಂಥ ಶಿಬಿರಗಳಿಗೆ ರಾಜತಾಂತ್ರಿಕರು ಮತ್ತು ಪತ್ರಕರ್ತರನ್ನು ಚೀನ ಕರೆದೊಯ್ಯುತ್ತಿರುವುದು ಇದು ಮೊದಲ ಬಾರಿಯಾಗಿದೆ.

ಮಸೀದಿ, ಕಾರ್ಖಾನೆ, ಮಾರುಕಟ್ಟೆಗಳಿಗೆ ಭೇಟಿ ನೀಡಿದ ರಾಜತಾಂತ್ರಿಕರು

‘‘ರಶ್ಯ, ಕಝಖ್‌ಸ್ತಾನ್, ಕಿರ್ಗಿಸ್ತಾನ್, ಉಝ್ಬೆಕಿಸ್ತಾನ್, ತಜಿಕಿಸ್ತಾನ್, ಭಾರತ, ಪಾಕಿಸ್ತಾನ, ಇಂಡೋನೇಶ್ಯ, ಮಲೇಶ್ಯ, ಅಫ್ಘಾನಿಸ್ತಾನ, ಥಾಯ್ಲೆಂಡ್ ಮತ್ತು ಕುವೈತ್ ದೇಶಗಳ ರಾಜತಾಂತ್ರಿಕ ರಾಯಭಾರಿಗಳು ಮತ್ತು ರಾಜತಾಂತ್ರಿಕ ರಾಯಭಾರಿಗಳ ಪ್ರತಿನಿಧಿಗಳನ್ನು ಕ್ಸಿನ್‌ಜಿಯಾಂಗ್ ಪ್ರಾಂತೀಯ ಸರಕಾರವು ಆಹ್ವಾನಿಸಿದೆ’’ ಎಂಬುದಾಗಿ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

‘‘ರಾಜತಾಂತ್ರಿಕ ರಾಯಭಾರಿಗಳು ಸ್ಥಳೀಯ ಮಾರುಕಟ್ಟೆಗಳು, ರೈತರು, ಶೈಕ್ಷಣಿಕ ಸಂಸ್ಥೆಗಳು, ಮಸೀದಿಗಳು, ಕಾರ್ಖಾನೆಗಳು ಹಾಗೂ ವೃತ್ತಿ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿದರು’’ ಎಂದು ವರದಿ ಹೇಳಿದೆ.

‘‘ಪ್ರವಾಸದ ಉದ್ದಕ್ಕೂ ಅವರು ಸ್ಥಳೀಯ ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಕೆಲಸಗಾರರನ್ನು ಸಂದರ್ಶಿಸಿದರು ಹಾಗೂ ಸಾಮಾಜಿಕ ಸ್ಥಿರತೆಯನ್ನು ಕಾದುಕೊಂಡು ಬರುವಲ್ಲಿ, ಜನರ ಜೀವನೋಪಾಯವನ್ನು ಸುಧಾರಿಸುವಲ್ಲಿ ಹಾಗೂ ಸ್ಥಳೀಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವಲ್ಲಿ ಈ ರಾಜ್ಯ ಸಾಧಿಸಿದ ಪ್ರಗತಿಯ ಬಗ್ಗೆ ತಿಳಿದುಕೊಂಡರು’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News