ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಿಳಾ ಕಾರ್ಮಿಕರ ಪ್ರತಿಭಟನೆ

Update: 2019-01-09 18:01 GMT

ಮಂಡ್ಯ,ಜ.9: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ರಸ್ತೆ ಸುರಕ್ಷತಾ ಕಾಯಿದೆ ಕೈಬಿಡಬೇಕು. ಕನಿಷ್ಠ ವೇತನ ನಿಗದಿ, ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು, ಬಿಸಿಯೂಟ ಕಾರ್ಯಕರ್ತೆಯರು, ಅಕ್ಷರ ದಾಸೋಹ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. 

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. 

ಇದಕ್ಕೂ ಮುನ್ನ ನಗರದ ಮಹಾವೀರ ವೃತ್ತ, ಜೆ.ಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. 
ತಮ್ಮ ವಿವಿಧ 12 ಬೇಡಿಕೆಗಳನ್ನು ಈಡೇರಿಸಬೇಕು, ಸೇವೆಯನ್ನು ಕಾಯಂ ಮಾಡಬೇಕು, ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು, ಮಾಸಿಕ 6 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು, ಎಲ್ಲ ಕಾರ್ಮಿಕರಿಗೂ 18 ಸಾವಿರ ವೇತನ ನಿಗದಿಪಡಿಸಬೇಕೆಂದು ಆಗ್ರಹಿಸಿದರು. 

ಸಿಐಟಿಯು ಮುಖಂಡರಾದ ಸಿ. ಕುಮಾರಿ, ಪ್ರಮೀಳಾಕುಮಾರಿ, ಪುಷ್ಪಾ, ಮಂಗಳಾ, ಸಾಯೀರಾಬಾನು, ಪುಷ್ಪಾವತಿ, ಪ್ರೊ. ಹುಲ್ಕೆರೆ ಮಹದೇವು, ಪ್ರೊ. ಜಿ.ಟಿ ವೀರಪ್ಪ, ಕೆ.ರಾಜು, ದೇವೇಗೌಡ, ಚಂದ್ರು, ಬಿ.ರಾಮಕೃಷ್ಣ, ಮಹದೇವಮ್ಮ, ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News