×
Ad

ಮೇಲ್ವರ್ಗಕ್ಕೆ ಮೀಸಲಾತಿ ನೀಡಿರುವುದು ಸಂವಿಧಾನ ವಿರೋಧಿ ಕೃತ್ಯ: ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್

Update: 2019-01-09 23:46 IST

ಚಿಕ್ಕಮಗಳೂರು, ಜ.9: ಮೇಲ್ವರ್ಗಕ್ಕೆ ಮೀಸಲಾತಿ ನೀಡುವುದರಿಂದ ಅಂಬೇಡ್ಕರ್ ಅವರ ಮೀಸಲಾತಿಯ ಪರಿಕಲ್ಪನೆಯ ತಳಪಾಯ ಹಾಳಾಗಿ ಹೋಗುತ್ತದೆ. ಇಂತಹ ಮೀಸಲಾತಿ ಅಂಬೇಡ್ಕರ್ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದರಿಂದಾಗಿ ಸಂವಿಧಾನವೇ ಅಪಾಯಕ್ಕೆ ಸಿಲುಕಲಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ತಿಳಿಸಿದರು.

ಕುವೆಂಪು ಕಲಾಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಬುಧವಾರ ಹಮ್ಮಿಕೊಂಡಿದ್ದ "ಜೀವಜೀವದ ಹಾಡುಗಳು" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಗಳಿಕೆಯ ಲಾಭಲೆಕ್ಕಾಚಾರದ ಹಿನ್ನೆಲೆಯಲ್ಲಿ ಜಾರಿ ಮಾಡಿರುವ ಮೇಲ್ವರ್ಗದವರ ಮೀಸಲಾತಿ ವ್ಯವಸ್ಥೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು, ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಆರ್ಥಿಕವಾಗಿ ಹಿಂದುಳಿದಿರುವುದನ್ನು ಪರಿಗಣಿಸಿ ಮೀಸಲಾತಿ ನೀಡಲಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕ ಹಕ್ಕುಗಳಿಂದ ವಂಚಿತರಾದ ಶೋಷಿತ ಸಮುದಾಯಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಮೀಸಲಾತಿ ಕಲ್ಪಿಸಿದರು ಎಂದರು.

ದಲಿತರಿಗೆ ಮೀಸಲಾತಿ ನೀಡುತ್ತಿರುವುದನ್ನು ವಿರೋಧಿಸುತ್ತಿದ್ದ ಸಮುದಾಯಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ನರೇಂದ್ರ ಮೋದಿ ನೀಡಲು ಮುಂದಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಇದಕ್ಕೆ ನೈತಿಕ ಬೆಂಬಲ ನೀಡಿದ್ದಾರೆ. ಈ ರೀತಿ ಮೇಲ್ವರ್ಗಕ್ಕೆ ಮೀಸಲಾತಿ ನೀಡಿದರೆ ಮೀಸಲಾತಿಯ ತಳಪಾಯವೆ ಹಾಳಾಗಿ ಹೋಗುತ್ತದೆ ಎಂದು ಎಚ್ಚರಿಸಿದ ಅವರು, ಮತೀಯ ರಾಜಕೀಯ ಶಕ್ತಿಗಳ ಹುಟ್ಟನ್ನು ಅಡಗಿಸುವ ಕೆಲಸ ಚಿಕ್ಕಮಗಳೂರು ಜಿಲ್ಲೆಯಿಂದಲೇ ಆರಂಭವಾಗಬೇಕೆಂದು ಕರೆ ನೀಡಿದರು.

ದೇಶ ಮತೀಯ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದೆ. ಹಾಗಾಗಿ ಭಾರತ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನ್ಯಾಯಧೀಶರೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದರೂ ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಂವಿಧಾನ ಧಿಕ್ಕರಿಸುವ ಷಡ್ಯಂತರ ನಡೆಯುತ್ತಿದ್ದರೂ ಯಾರು ತುಟಿ ಬಿಚ್ಚುತ್ತಿಲ್ಲ ಎಂದು ವಿಷಾದಿಸಿದ ಅವರು, ದಲಿತರ ಮೇಲೆ ದೌರ್ಜನ್ಯ ನಡೆಯದಿರುವ ದಿನಗಳಿಲ್ಲ, ಕೈಗಡಿಯಾರ ಕಟ್ಟುವಂತಿಲ್ಲ. ಕುದುರೆ ಏರುವಂತಿಲ್ಲ. ದೇವಾಲಯಕ್ಕೆ ಹೋಗದಂತಹ ಪರಿಸ್ಥಿತಿ ಈ ದೇಶದಲ್ಲಿ ನಿರ್ಮಾಣಗೊಂಡಿದೆ ಎಂದರು.

ಹಾಡು, ಸಂಗೀತ, ನಾಟಕ ಮನಶಾಂತಿಗಲ್ಲ. ಮನುಷ್ಯನನ್ನು ಮನುಷ್ಯನನ್ನಾಗಿಸಿ ನಡೆಸುವುದಕ್ಕೆ ಕೊಡುಗೆ ಕೊಡುತ್ತವೆ. ಇವುಗಳಿಗೆ ಸಾಂಸ್ಕೃತಿಕ ಶಕ್ತಿ ಇದೆ. ಒಂದು ಹಾಡು ಜೀವ ಮತ್ತು ಸಮಾಜಕ್ಕೆ ಸಾತ್ವಿಕ ಚಿಂತನೆ ಒದಗಿಸುತ್ತದೆ ಎಂದು ಅಭಿಪ್ರಾಯಿಸಿದ ಅವರು, ಜನಪದ ಮತ್ತು ಹೋರಾಟದ ಹಾಡುಗಳು ಜನರ ನೋವು, ಬವಣೆ, ಸಂಕಟವನ್ನು ತಟ್ಟುತ್ತವೆ ಮತ್ತು ಮುಟ್ಟುತ್ತವೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಹಾಡು ಹೇಳಿಕೊಂಡು ಬರುವ ಜನರನ್ನು ನಂಬುತ್ತಿದ್ದಾರೆ. ಜನಪರ ಹೋರಾಟ ಹಾಡುಗಳು ಮಾನವೀಯತೆಯ ಪಾಠ ಕಲಿಸುತ್ತವೆ. ಮಾನವೀಯ ಸಂಬಂಧವನ್ನು ಬೆಳೆಸಿ ಗಟ್ಟಿಗೊಳಿಸುತ್ತವೆ. ಹೋರಾಟ ಮುನ್ನಡೆಸುವ ಶಕ್ತಿಯನ್ನು ಕಲಿಸುತ್ತವೆ. ಅಂಬೇಡ್ಕರ್ ಎಳೆದ ಹೋರಾಟದ ರಥವನ್ನು ಇಂದಿನ ಯುವಕರು ಹಾಡುಗಳ ಮೂಲಕ ಆ ರಥವನ್ನು ಮುನ್ನಡೆಸಲು ಮನ್ನುಗ್ಗಬೇಕೆಂದು ಮನವಿ ಮಾಡಿದರು. 

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಅಲ್ಲಂಪುರ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋರಾಟದ ಹಾಡುಗಾರ ಹೆಚ್.ಜನಾರ್ಧನ್, ರಾಜ್ಯ ಸಂಘಟನಾ ಸಂಚಾಲಕರಾದ ಸಿದ್ದಲಿಂಗಯ್ಯ, ಹೆಬ್ಬಾಲೆ ಲಿಂಗರಾಜು, ಗಂಗನಂಜಯ್ಯ, ಬಿ.ಆರ್.ಮಹೇಶ್, ನಂದಿಶೇಖರಪ್ಪ, ಅಂಗಡಿ ಚಂದ್ರು, ಮಂಜುನಾಥ್, ಉಮೇಶ್, ಅನಂತ್ ಇದ್ದರು. ಕೂದುವಳ್ಳಿ ದೇವರಾಜ್ ಸ್ವಾಗತಿಸಿ, ಶೂದ್ರ ಶಿವು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News