ಸತತ 17 ದಿನ ಕಾದು ಕುಳಿತು ಎಟಿಎಂ ವಂಚಕನನ್ನು ಪೊಲೀಸರಿಗೊಪ್ಪಿಸಿದ ಮಹಿಳೆ

Update: 2019-01-10 09:06 GMT

ಮುಂಬೈ, ಜ.10: ಬಾಂದ್ರಾದ ಎಟಿಎಂ ಒಂದರಲ್ಲಿ ತನ್ನನ್ನು ವಂಚಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಲು ರೆಹಾನ ಶೇಖ್ (35) ಎಂಬ ಮಹಿಳೆ ಸತತ ಎರಡು ವಾರಗಳಿಗೂ ಹೆಚ್ಚು ಕಾಲ  ಎಟಿಎಂ ಬಳಿ ಕಾದು ಕುಳಿತು ಅಂತಿಮವಾಗಿ ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ 36 ವರ್ಷದ ಭೂಪೇಂದ್ರ ಮಿಶ್ರಾ ವಿರುದ್ಧ ಈಗಾಗಲೇ ಏಳು ಪ್ರಕರಣಗಳಿದ್ದು, ಆತನನ್ನು ಕಳೆದ ವರ್ಷದ ಜನವರಿಯಲ್ಲಿ ಎಟಿಎಂಗಳಲ್ಲಿ ಜನರನ್ನು ವಂಚಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು ಎಂದು ಪೊಲಿಸರು ತಿಳಿಸಿದ್ದಾರೆ.

ಡಿಸೆಂಬರ್ 18ರಂದು ರೆಹಾನ ಪಾಲಿ ಹಿಲ್ ಪ್ರದೇಶದಲ್ಲಿರುವ ತಮ್ಮ  ಕಚೇರಿಗೆ ತೆರಳಲೆಂದು  ರೈಲಿನಿಂದಿಳಿದು ಬಾಂದ್ರಾ ನಿಲ್ದಾಣದ ಪಕ್ಕದ ಎಟಿಎಂಗೆ ತೆರಳಿದ್ದ ಸಂದರ್ಭ ತಾಂತ್ರಿಕ ಕಾರಣದಿಂದ ಆಕೆಗೆ ಹಣ ಪಡೆಯುವುದು ಸಾಧ್ಯವಾಗಿರಲಿಲ್ಲ. ಆಗ ಎಟಿಎಂ ಬಾಗಿಲಲ್ಲಿ ನಿಂತಿದ್ದ ಆರೋಪಿ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಅಲ್ಲಿಗೆ ಬಂದಿದ್ದ. ರೆಹಾನಾರಿಗೆ ಹಣ ಪಡೆಯುವುದು ಸಾಧ್ಯವಾಗಿಲ್ಲದೇ ಇದ್ದರೂ ಅಷ್ಟರೊಳಗಾಗಿ ಆತ ಆಕೆಯ ಎಟಿಎಂ ಕಾರ್ಡ್ ಮಾಹಿತಿ ಸಂಗ್ರಹಿಸಿದ್ದ. ಆಕೆ ತಮ್ಮ ಕಚೇರಿ ತಲುಪುವಷ್ಟರಲ್ಲಿ ಆಕೆಗೆ ಮೊಬೈಲ್ ಸಂದೇಶದಲ್ಲಿ ಖಾತೆಯಿಂದ ರೂ 10,000 ಹಣ ತೆಗೆದಿರುವ ಮಾಹಿತಿ ಬಂದಿತ್ತು.

ವಡಾಲ ನಿವಾಸಿಯಾಗಿರುವ ರೆಹಾನಾ ಕೂಡಲೇ ಎಟಿಎಂ ಪಕ್ಕಕ್ಕೆ ಧಾವಿಸಿದರೂ ಅಲ್ಲಿ ಆರೋಪಿ ಇರಲಿಲ್ಲ. ನಂತರ  ಮುಂದಿನ 17 ದಿನಗಳ ಕಾಲ ಆಕೆ ರೈಲಿನಿಂದಿಳಿದು ಪ್ರತಿ ದಿನ ಅದೇ ಎಟಿಎಂ ಪಕ್ಕದಲ್ಲಿ ಬಂದು ಆತನಿಗೆ ಕಾದಿದ್ದರು. ಅಂತಿಮವಾಗಿ ಜನವರಿ 4ರಂದು ಆ ವ್ಯಕ್ತಿ ರಾತ್ರಿ 11.30ರ ಸುಮಾರಿಗೆ ನಿಂತಿದ್ದು ಕಂಡ ರೆಹಾನ ಆತನನ್ನು ಕೂಡಲೇ ಪೊಲೀಸರಿಗೆ ಕರೆ ಮಾಡಿ ಆತನನ್ನು ಅವರಿಗೆ ಹಸ್ತಾಂತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News