ರೈತರ ಬೆಳೆ ವಿಮೆಯಲ್ಲಿ ವಂಚನೆ ರಫೇಲ್‌ಗಿಂತ ದೊಡ್ಡ ಹಗರಣ: ಆರೋಪ

Update: 2019-01-10 14:21 GMT
ಸಚಿನ್ ಮೀಗಾ

ಬೆಂಗಳೂರು, ಜ. 10: ರಾಜ್ಯದ ರೈತರ ಬೆಳೆ ವಿಮೆ ಯೋಜನೆ ಹೆಸರಿನಲ್ಲಿ 60 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಲೂಟಿ ಮಾಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೋರಿ ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾರಿಗೆ ಪತ್ರ ಬರೆದಿದ್ದಾರೆ.

ಬೆಳೆ ವಿಮೆ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐನಲ್ಲಿ ಪ್ರಧಾನಿ ಮೋದಿ, ವಿಮೆ ಕಂಪೆನಿಯ ಗೌತಮ್ ಅದಾನಿ, ಅನಿಲ್ ಅಂಬಾನಿ, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ಸಿಂಗ್, ಸೋಂಪೊ ಜನರಲ್ ಇನ್ಸುರೆನ್ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಕುಮಾರ್, ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರೈತರ ಆತ್ಮಹತ್ಯೆ ತಡೆಗಟ್ಟುವ ಉದ್ದೇಶದಿಂದ ಬೆಳೆ ನಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ರೈತರಿಗೆ ನೆರವು ನೀಡಲು 2015ರಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ಈ ಯೋಜನೆ ಹೆಸರಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಕೇವಲ ಆರು ತಿಂಗಳಲ್ಲಿ 1500 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಅದಾನಿ ಮತ್ತು ಅಂಬಾನಿ ಕಂಪೆನಿಗಳು ರೈತರಿಂದ ಲೂಟಿ ಮಾಡಿವೆ ಎಂದು ಅವರು ದೂರಿದ್ದಾರೆ.

ಬೀದರ್ ಜಿಲ್ಲೆಯಲ್ಲಿ 3ಲಕ್ಷಕ್ಕೂ ಅಧಿಕ ಮಂದಿ ರೈತರು ನೋಂದಣಿ ಮಾಡಿದ್ದಾರೆ. ಆದರೆ, ಕೇವಲ 1,672ಮಂದಿ ರೈತರಿಗಷ್ಟೇ ಪರಿಹಾರ ಸಿಕ್ಕಿದೆ. 240 ಕೋಟಿ ರೂ.ಹಣ ಸಂಗ್ರಹಿಸಿದ್ದು, ಕೇವಲ 8 ರಿಂದ 10 ಕೋಟಿ ರೂ. ಬೆಳೆ ವಿಮೆ ಪರಿಹಾರ ನೀಡಿದ್ದು, ಉಳಿದ 230 ಕೋಟಿ ರೂ ಲೂಟಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ, ಅದಾನಿ ಮತ್ತು ಅಂಬಾನಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಯೋಜನೆ ರೂಪಿಸಿರುವ ಸಂಶಯವಿದೆ. ರಫೇಲ್ ಯುದ್ಧ ವಿಮಾನ ಖರೀದಿಗಿಂತಲೂ ದೊಡ್ಡ ಹಗರಣ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News