ಕಣ್ಣಿನ ಆರೋಗ್ಯದತ್ತ ವಿಶೇಷ ಗಮನ ಅತ್ಯಗತ್ಯ: ಡಾ.ರಶ್ಮಿ
ಚಿಕ್ಕಮಗಳೂರು, ಜ.10: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದರೊಂದಿಗೆ ಕಣ್ಣಿನ ಬಗ್ಗೆಯು ಹೆಚ್ಚಿನ ಕಾಳಜಿ ನೀಡುವುದು ಅತ್ಯಗತ್ಯ ಎಂದು ಜೀವನ್ ಸಂದ್ಯಾ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ.ರಶ್ಮಿ ತಿಳಿಸಿದರು.
ಗುರುವಾರ ನಗರದ ಅಜಾದ್ ಪಾರ್ಕ್ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಜೈನ್ ಶ್ವೇತಾಂಬರ ಮಹಿಳಾ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದವರು, ವಿದ್ಯಾರ್ಥಿಗಳು ಮತ್ತು ವೈಯೋವೃದ್ಧರು ಪ್ರತೀ ವರ್ಷ ತಮ್ಮ ಕಣ್ಣನ್ನು ಪರೀಕ್ಷಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪೌಷ್ಟಿಕ ಆಹಾರವಾದ ತರಕಾರಿ ಮತ್ತು ಸೋಪ್ಪುಗಳನ್ನು ಹೆಚ್ಚಾಗಿ ಸೇವಿಸುವುದರ ಜೊತೆಗೆ ಕಣ್ಣಿನ ವ್ಯಾಯಾಮವನ್ನು ಮಾಡಬೇಕು ಮೊಬೈಲ್, ಕಂಪ್ಯೂಟರ್‍ನಲ್ಲಿ ಹೆಚ್ಚಾಗಿ ಗೇಮ್‍ಗಳನ್ನು ಆಡುವುದರಿಂದ ಕಣ್ಣಿನ ಸಮಸ್ಯೆ ಉಂಟಾಗುತ್ತದೆ ಎಂದ ಅವರು, ಸಾಮಾನ್ಯವಾಗಿ ಸಾರ್ವಜನಿಕರು ಕಣ್ಣಿನ ದೃಷ್ಠಿ ಕಡಿಮೆ ಆಗುವವರೆಗೂ ವೈದ್ಯರ ಬಳಿ ಹೋಗುವುದಿಲ್ಲ. ಕಣ್ಣಿನ ತೊಂದರೆಗಳು ನಿಧಾನವಾಗಿ ಉಲ್ಬಣಗೊಳ್ಳುತ್ತವೆ. ಆದ್ದರಿಂದ ಆರಂಭದಲ್ಲೇ ತಪಾಸಣೆ ಮಾಡಿಸುವುದು ಅತ್ಯಗತ್ಯ ಎಂದರು.
ಜೈನ ಶ್ವೇತಾಂಬರ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪಾಬಾಯಿ ಮಾತನಾಡಿ, ಸಂಘದ ವತಿಯಿಂದ ಸರಕಾರಿ ಶಾಲೆಯಲ್ಲಿ ಮಕ್ಕಳ ಕಣ್ಣಿನ ತಪಾಸಣೆಯನ್ನು ನುರಿತ ತಜ್ಞರಿಂದ ಮಾಡಿಸುವುದರ ಜೊತೆಗೆ ಈ ಶಾಲೆಗೆ ಅಗತ್ಯ ಇರುವ ಜಮಕಾನ ಮತ್ತು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಮಂಜುಬಾಯಿ, ಕಾರ್ಯದರ್ಶಿ ಸರಿತಾ ನರೇಂದ್ರ, ಸಹ ಕಾರ್ಯದರ್ಶಿ ಸ್ವಪ್ನಾ, ಖಜಾಂಚಿ ಆರತಿ, ಜೈನ್‍ಸಂಘದ ಅಧ್ಯಕ್ಷ ಗೌತಮ್‍ಚಂದ್ ಮುಖಂಡ ಕಾಂತಿಲಾಲ್, ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕ ಲೋಕೇಶ್‍ಚಾರ್ಯ ಉಪಸ್ಥಿತರಿದ್ದರು.