×
Ad

ಬ್ಲಾಕ್‍ ಮೇಲ್ ಸಂಸ್ಕೃತಿಯಿಂದ ವರದಿ ಅನುಷ್ಠಾನಕ್ಕೆ ಅಡ್ಡಿ: ಸಿ.ಟಿ.ರವಿ

Update: 2019-01-10 20:07 IST

ಚಿಕ್ಕಮಗಳೂರು. ಜ. 10: ಸಂಘಟನೆಯ ಕೆಲ ಮುಖಂಡರ ಬ್ಲಾಕ್‍ಮೇಲ್ ಸಂಸ್ಕೃತಿಯ ಕಾರಣದಿಂದಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಇನ್ನೂ ಜಾರಿಯಾಗಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಜಿಲ್ಲಾ ಮಾದಿಗ ದಂಡೋರ ಸಮಿತಿ ಹಾಗೂ ಕಡೂರು ಮತ್ತು ಚಿಕ್ಕಮಗಳೂರು ತಾಲೂಕು ದಂಡೋರ ಸಮಿತಿಗಳ ಆಶ್ರಯದಲ್ಲಿ ಸಖರಾಯಪಟ್ಟಣ ಸಮೀಪದ ಪ್ರವಾಸಿ ಮಂದಿರದಲ್ಲಿ ಇತ್ತೀಚಿಗೆ ನಡೆದ ಸಕ್ರೀಯ ಕಾರ್ಯಕರ್ತರ ಕಾರ್ಯಾಗಾರ ಹಾಗೂ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಜಾರಿಗೆ ಸರಾಕರ ಹಿಂದೇಟು ಹಾಕಲು ಸಮುದಾಯದ ಮುಖಂಡರಲ್ಲಿನ ಒಗ್ಗಟ್ಟು ಹಾಗೂ ನಿಸ್ವಾರ್ಥ ಹೋರಾಟದ  ಕೊರತೆಯೇ ಕಾರಣವಾಗಿದೆ ಎಂದು ತಿಳಿಸಿದರು.

ಸಂಘಟನೆಯ ಮುಖಂಡರು ಹೋರಾಟವನ್ನು ಬ್ಲಾಕ್‍ಮೇಲ್ ಮಾಡುವುದಕ್ಕೆ ಬಳಸು

ಕೊಳ್ಳುತ್ತಿರುವುದರಿಂದ ಪ್ರತ್ಯೇಕ ಮೀಸಲಾತಿ ಜಾರಿಗೆ ಅಡ್ಡಿಯಾಗಿದೆ, ಮುಖಂಡರು ಈ ಪ್ರವೃತ್ತಿಯನ್ನು ಕೈಬಿಟ್ಟು ನಿಸ್ವಾರ್ಥ ಸಂಘಟಿತ ಹೋರಾಟಕ್ಕೆ ಮುಂದಾದಲ್ಲಿ ತಾವು ಕೂಡ ಅವರ ಧ್ವನಿಯಾಗಿ ಕೆಲಸ ಮಾಡುವುದಾಗಿ ಹೇಳಿದರು.

ಸಮಾಜದಲ್ಲಿ ಮಾದಿಗ ಸಮುದಾಯ ಮಾತ್ರ ಸಂಘಟಿತರಾದರೆ ಸಾಲದು ಇಡೀ ಹಿಂದೂ ಸಮಾಜವೇ ಸಂಘಟಿತವಾಗಬೇಕು, ರಾಜ್ಯದಲ್ಲಿ ನಡೆಯುತ್ತಿರುವ ಮತಾಂತರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ, ವಾಸ್ತವಿಕ ಮೀಸಲಾತಿ ಸಂವಿಧಾನದ ಆಶಯ, ಉಳ್ಳವರ ಮೀಸಲಾತಿ ಲಾಭ ಬೇರೆಯವರಿಗೂ ಸಿಗಬೇಕು, ಕಟ್ಟಕಡೆಯ ಮನುಷ್ಯನಿಗೂ ಮೀಸಲಾತಿ ಸೌಲಭ್ಯ ದೊರೆಯಬೇಕೆಂಬುದು ಅಂಬೇಡ್ಕರ್‍ರವರ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಸಂಘಟನೆಗಳು ಕೆಲಸ ಮಾಡಬೇಕಾಗಿದೆ ಎಂದರು.

ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎನ್. ಶಂಕರಪ್ಪ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಸಮುದಾಯಕ್ಕೆ ರಾಜಕೀಯ ಮೀಸಲಾತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. 20 ವರ್ಷಗಳ ಹೋರಾಟದ ಫಲವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಸಿದ್ಧಪಡಿಸಿದೆ, ಅದನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ ಎಂದು ಟೀಕಿಸಿದರು. ರಾಜ್ಯದಲ್ಲಿ 90 ಲಕ್ಷಕ್ಕೂ ಹೆಚ್ಚು ಅಧಿಕ ಜನಸಂಖ್ಯೆಯುಳ್ಳ ಈ ಸಮುದಾಯವನ್ನು ಸರ್ಕಾರ ಕಡೆಗಣಿಸುತ್ತಿದೆ. 28 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಈವರೆಗೂ ಅನುಷ್ಠಾನಗೊಳ್ಳದೇ ಧೂಳು ಹಿಡಿಯುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಮಾತನಾಡಿ, ಈ ಸಮುದಾಯ ಹಬ್ಬ, ಅರಿದಿನಗಳಂತಹ ಆಚರಣೆಗಳನ್ನು ಕಡಿಮೆಮಾಡಿ, ದುಶ್ಚಟ, ದುರಾಭ್ಯಾಸಗಳನ್ನು ದೂರಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿ, ಈ ನಿಟ್ಟಿನಲ್ಲಿ ಸಂಘಟನೆಗಳು ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಹೋರಾಟ ಸಮಿತಿಯ ಮುಖಂಡರಾದ ಮಾದೇವಯ್ಯ, ಲೋಕೇಶಪ್ಪ, ಮುನಿರಾಜು, ಮಾದೇವಪ್ಪ ಮಾತನಾಡಿದರು. ಕಡೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಪ್ರಹ್ಲಾದ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ಯು.ಆರ್. ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಕಡೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ ಸ್ವಾಗತಿಸಿದರು. ಚಿಕ್ಕಮಗಳೂರು ತಾಲ್ಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಬಿಳೇಕಲ್ಲಹಳ್ಳಿ ಗ್ರಾ.ಪಂ. ಸದಸ್ಯ ಪುಟ್ಟೇಗೌಡ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News