×
Ad

ಅಪಾರ ಜಾನಪದ ಕಲೆಗಳ ಬೀಡು ಮಲೆನಾಡು: ಶೈಲಜಾ ಹೆಗ್ಡೆ

Update: 2019-01-10 20:14 IST

ಶೃಂಗೇರಿ, ಜ.10: ಕಲೆ ಮತ್ತು ಸಂಸ್ಕೃತಿಯು ಸ್ವಸ್ಥ ಸಮಾಜದ ಕುರುಹುಗಳಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ತಿಳಿಸಿದರು.

 ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಶ್ರೀ ಭಾರತೀತೀರ್ಥ ಸಾಂಸ್ಕೃøತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ, ಕನ್ನಡ ಸಂಸ್ಕøತಿ ಇಲಾಖೆ ಸಹಕಾರದಲ್ಲಿ ಏರ್ಪಡಿಸಿದ್ದ ಮಲೆನಾಡು ಉತ್ಸವ ಕಾರ್ಯಕ್ರಮವನ್ನು ಭತ್ತ ಕೇರುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಮಲೆನಾಡು ಸಾಂಸ್ಕೃತಿಕವಾಗಿ ಅಪಾರವಾದ ಜಾನಪದ ಸಂಪತ್ತನ್ನು ಹೊಂದಿದ ಪ್ರದೇಶವಾಗಿದೆ. ಇಲ್ಲಿ ರಂಗಭೂಮಿ ಕೂಡ ಶತಮಾನಗಳ ಇತಿಹಾಸದ ಹಿರಿಮೆ ಪಡೆದಿದೆ. ಇಂತಹ ರಂಗಭೂಮಿ ಮಾಧ್ಯಮದಿಂದ ಹೆಸರು ಮಾಡಿರುವ ಬಿ.ಎಲ್ ರವಿಕುಮಾರ್ ಇಂದಿನ ಯುವ ತಲೆಮಾರಿಗೆ ಮಾದರಿಯಗಿದ್ದಾರೆ. ನಾಟಕದ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ ಸವ್ಯಸಾಚಿ ಅವರಾಗಿದ್ದಾರೆಂದರು.  

ಉತ್ಸವ ಸಂಚಾಲಕ ಎಸ್.ಎನ್ ವಿಶ್ವನಾಥ್ ಅವರು ಸಮಾಜಸೇವಕಿ ಶ್ಯಾಮಲಾ ರಂಗನಾಥ್ ಸಂಸ್ಮರಣೆ ಮಾಡಿ, ಶ್ಯಾಮಲಾ ಅವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ ಇಂದಿನ ಸ್ವಾರ್ಥಪರ ಪ್ರಪಂಚದಲ್ಲಿ ಒಂದು ವಿಶೇಷವಾದ ಸ್ಥಾನವನ್ನು ಪಡೆದಿದೆ. ಮಲೆನಾಡಿನ ಗೃಹಿಣಿಯರನ್ನು ಅವರು ಸೃಜನಶೀಲತೆಯ ಕಡೆಗೆ ಸೆಳೆದೊಯ್ಯುತ್ತಿದ್ದ ಪರಿ ಅವರ ವ್ಯಕ್ತಿತ್ವದ ಕನ್ನಡಿಯಾಗಿದೆ. ಗೃಹ ಕೃತ್ಯದ ಹೆಂಗಸರಿಗೂ ಸಮಾಜಮುಖಿ ಕಾರ್ಯಕ್ಕೆ ಪ್ರೇರಣೆ ಒದಗಿಸುತ್ತಿದ್ದ ಅಪರೂಪದ ವ್ಯಕ್ತಿ ಶ್ಯಾಮಲಾ. ಇಂತಹ ಕ್ರಿಯಾಶೀಲ ಮಹಿಳೆಯನ್ನು ಸ್ಮರಿಸುವ ಮೂಲಕ ಮಲೆನಾಡು ಉತ್ಸವ ಮಹಿಳೆಯರಿಗೂ ಪ್ರಾಮುಖ್ಯ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಕಲ್ಕುಳಿ ವೆಂಕಟೇಶ್, ಮಲೆನಾಡಿನ ಕಲೆ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಮಲೆನಾಡು ಉತ್ಸವ ವರ್ಷದಿಂದ ವರ್ಷಕ್ಕೆ ವಿನೂತನ ಚಿಂತೆಯನ್ನು ಅಳವಡಿಸಿಕೊಳ್ಳುತ್ತಾ ಮೈಲಿಗಲ್ಲು ನಿರ್ಮಿಸುತ್ತಿದೆ. ಈ ಉತ್ಸವವನ್ನು ಪ್ರೋತ್ಸಾಹಿಸುವುದು ಕಲಾಭಿಮಾನಿಗಳ ಕರ್ತವ್ಯ ಎಂದು ತಿಳಿಸಿದರು.

ಉದ್ಯಮಿ ವಿ.ಆರ್ ರಾಜೇಶ್ ಮತ್ತು ಶೈಕ್ಷಣಿಕ ಕ್ಷೇತ್ರದ ಎನ್.ಲೋಕೇಶ್ ಇವರಿಗೆ ಮಲೆನಾಡು ಉತ್ಸವದ ಸಮರ್ಪಣಾ ಗೌರವವನ್ನು ಪ್ರದಾನ ಮಾಡಲಾಯಿತು. ಇದೇ ವೇಳೆ ಶ್ಯಾಮಲಾ ರಂಗನಾಥ್ ಸ್ಮರಣಾರ್ಥ ನೀಡಲಾದ ವಿಶೇಷ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ಭಾರತೀಯ ಅನಿವಾಸಿ ಸಮಿತಿಯ ಮಾಜಿ ಉಪಾಧ್ಯಕ್ಷೆ ಆರತಿಕೃಷ್ಣ ಇವರು ಸ್ವೀಕರಿಸಿದರು.

ಸಮಾರಂಭದಲ್ಲಿ ಉತ್ಸವ ಅಧ್ಯಕ್ಷರಾದ ರಂಗ ಕಲಾವಿದ ಬಿ.ಎಲ್ ರವಿಕುಮಾರ್, ಆಯೋಜಕ ರಮೇಶ್ ಬೇಗಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಬಿ.ಎನ್.ವಿ ಸುಬ್ರಮಣ್ಯಂ ಕುರಿತ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಮಲೆನಾಡು ಉತ್ಸವದ ಮೊದಲನೆ ದಿನದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕೊಪ್ಪದ ಭಾವಯಾನ ತಂಡದಿಂದ ನಡೆದ ಭಾವತೀರಯಾನ ಒಂದು ಮಧುರ ಅನುಭವವನ್ನು ಕೇಳುಗರಿಗೆ ನೀಡುವಲ್ಲಿ ಯಶಸ್ಸು ಪಡೆಯಿತು. ನಾಗರತ್ನ ನಟರಾಜ್ ಮತ್ತು ಇಮ್ತಿಯಾಜ್ ಸುಲ್ತಾನ್ ಕನ್ನಡದ ಗೀತೆಗಳಿಗೆ ಧ್ವನಿಯಾದರು. ಪಿ. ಕಾಳಿಂಗರಾವ್ ಅವರ ಜನಪ್ರಿಯ ಗೀತೆ "ಅಳುವ ಕಡಲೊಳು" ಹಾಡನ್ನು ನಾಗರತ್ನ ಪ್ರಸ್ತುತಪಡಿಸಿ ಪ್ರೇಕ್ಷಕರ ಮನಗೆದ್ದರು. ನಂತರ ಬೆಂಗಳೂರಿನ ಕ್ರಿಯೇಟೀವ್ ಥಿಯೇಟರ್ ತಂಡದವರು ಹೆಸರಾಂತ ಮಲೆಯಾಳಿ ಬರಹಗಾರ ವೈಕಂ ಬಷೀರ್ ಇವರ ಸಣ್ಣ ಕಥೆಯನ್ನು ಆಧರಿಸಿದ "ಮೂಗು ಮಸಾಲ" ಎಂಬ ವಿಡಂಬನಾತ್ಮಕ ನಾಟಕವನ್ನು ರಂಜನೀಯವಾಗಿ ಪ್ರದರ್ಶಿಸಿದರು. ಕೇವಲ 5 ಜನ ಕಲಾವಿದರು 30 ಕ್ಕೂ ಹೆಚ್ಚು ಪಾತ್ರವನ್ನು ರಂಗದಲ್ಲಿ ತಂದು ಅಚ್ಚರಿ ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News