ಹತ್ಯೆ ಪ್ರಕರಣ: ಮಂಡ್ಯ ನಗರಸಭೆಯ ಇಬ್ಬರು ಮಾಜಿ ಸದಸ್ಯರು ಸೇರಿ 9 ಮಂದಿಗೆ ಜೀವಾವಧಿ ಶಿಕ್ಷೆ

Update: 2019-01-10 15:05 GMT

ಮಂಡ್ಯ,ಜ.10: ಆಸ್ತಿ ವಿಚಾರವಾಗಿ ಕಳೆದ 9 ವರ್ಷದ ಹಿಂದೆ ನಗರದಲ್ಲಿ ನಡೆದಿದ್ದ ಅಕ್ಕಿ ಅಂಗಡಿ ಮಾಲಕ ರಫೀವುಲ್ಲಾ ಹತ್ಯೆ ಪ್ರಕರಣದ 9 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ನಗರದ ಗಾಂಧಿನಗರ ಬಡಾವಣೆಯಲ್ಲಿ 2010ರ ಜ.18ರಂದು ರಫೀವುಲ್ಲಾ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮಂಡ್ಯ ನಗರಸಭೆಯ ಇಬ್ಬರು ಮಾಜಿ ಸದಸ್ಯರು ಸೇರಿದಂತೆ ಎಲ್ಲಾ 9 ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ತೀರ್ಪು ಪ್ರಕಟಿಸಿದ್ದಾರೆ.  

ಮುಜಾಹಿದ್ ಅಹಮದ್, ಫಿರ್ದೋಷ್ ಅಹಮದ್, ಮತೀಬ್ ಅಹಮದ್, ಇರ್ಷಾದ್ ಆಲಿಖಾನ್, ಮುಜಾಹಿದ್ ಪಾಷಾ, ಇಮ್ರಾನ್ ಪಾಷ, ಮಹಮ್ಮದ್ ಅಲಿ, ತೌಸಿಫ್ ಅಹಮದ್, ಅಫ್ರೀಜ್ ಅಹಮದ್ ಅವರನ್ನು ಅಪರಾಧಿಗಳೆಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರು. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.  

ಪ್ರಕರಣದಲ್ಲಿ ಫಿರ್ಯಾದಿಗಳು ಜೆಡಿಎಸ್ ಮುಖಂಡ ಜಫ್ರುಲ್ಲಾ ಖಾನ್ ವಿರುದ್ಧವೂ ದೂರು ನೀಡಿದ್ದರು. ಪ್ರಥಮ ತನಿಖಾ ವರದಿಯಲ್ಲಿ ಜಫ್ರುಲ್ಲಾ ಖಾನ್ ಹೆಸರು ಕೂಡ ಇತ್ತು. ಅವರನ್ನು ಮೊದಲ ಆರೋಪಿ ಎಂದೇ ಪರಿಗಣಿಸಲಾಗಿತ್ತು. ಆ ವಿರುದ್ಧ ಜಫ್ರುಲ್ಲಾ ಖಾನ್ ಹೈಕೋರ್ಟ್ ಮೊರೆ ಹೋಗಿದ್ದರು.

ಜಫ್ರುಲ್ಲಾ ಖಾನ್ ಅವರನ್ನು ಖುಲಾಸೆಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಹೀಗಾಗಿ 9 ಆರೋಪಿಗಳ ವಿರುದ್ಧ ವಿಚಾರಣೆ ನಡೆದಿತ್ತು. ಸಾಕ್ಷ್ಯಾಧಾರಗಳಿಂದ ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾದ ಕಾರಣ ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ.  

ಕಳೆದ ಸೋಮವಾರವೇ ಪ್ರಕರಣದ ವಿಚಾರಣೆ ಮುಗಿಸಿ, ತೀರ್ಪು ಕಾಯ್ದಿರಿಸಲಾಗಿತ್ತು. ಅಂದೇ ಎಲ್ಲಾ 9 ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ತೆಗೆದುಕೊಂಡು ಗುರುವಾರ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮುಜಾಹಿದ್ ಅವರು ಮಂಡ್ಯ ನಗರಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News