ಸುರಕ್ಷಿತವಾಗಿ ದುಬೈ ತಲುಪಿದ ಉತ್ತರ ಕನ್ನಡ ಜಿಲ್ಲೆಯ 18 ಮೀನುಗಾರರು

Update: 2019-01-10 15:12 GMT

ಭಟ್ಕಳ,ಜ.10: ಅಕ್ರಮ ಗಡಿ ಪ್ರವೇಶದ ಆರೋಪದಡಿ ಕಳೆದ 8 ತಿಂಗಳ ಹಿಂದೆ ಇರಾನ್ ಸರ್ಕಾರದಿಂದ ಬಂಧಿಸಲ್ಪಟ್ಟು ಅಲ್ಲಿ ಗೃಹಬಂಧನ ಎದುರಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರು ಸೇರಿದಂತೆ ಭಾರತದ ಒಟ್ಟು 28 ಮೀನುಗಾರರು ಸುರಕ್ಷಿತವಾಗಿ ಬುಧವಾರ ರಾತ್ರಿ ಬೋಟ್ ಮೂಲಕ ದುಬೈನ ಜುಮೈರಾ ಬಂದರ್ ತಲುಪಿದರು.

ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ತಲುಪಿದ್ದಾಗಿ ಮೀನುಗಾರರ ಕುಟುಂಬದವರು ದೃಢಪಡಿಸಿದ್ದು, ದುಬೈಯಿಂದ ಫೋಟೊ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದಾರೆ. 

ಜುಲೈ 27ರಂದು 28 ಮೀನುಗಾರರು ದುಬೈ ಮೂಲಕ ಮೀನುಗಾರಿಕೆಗೆ ತೆರಳಿದ್ದು, ಇರಾನ್ ನೇವಿ ಆಧಿಕಾರಿಗಳು ಅಕ್ರಮ ಗಡಿ ಪ್ರವೇಶದ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಬೋಟುಗಳನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಮೀನುಗಾರರನ್ನು ಗೃಹಬಂಧನದಲ್ಲಿಟ್ಟಿದ್ದರು.

ದುಬೈ ಕರ್ನಾಟಕ ಎನ್.ಅರ್.ಐ ಫೋರಂ ನ ಪ್ರಯತ್ನದಿಂದಾಗಿ ಮಂಗಳವಾರ ಬಿಡುಗಡೆಗೊಂಡಿದ್ದ ಭಟ್ಕಳ, ಉತ್ತರ ಕನ್ನಡ ಜಿಲ್ಲೆಯ 18 ಮೀನುಗಾರರು ಸೇರಿದಂತೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಐವರು ಹಾಗೂ 5 ಜನ ಬೋಟ್ ಮಾಲಕರು ಸೇರಿದಂತೆ ಒಟ್ಟು 28 ಮಂದಿ ಈಗ ಸುರಕ್ಷಿತವಾಗಿ ದುಬೈ ತಲುಪಿದ್ದಾರೆ. 

ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರ ವಿವರ: ಭಟ್ಕಳದ ನಿವಾಸಿಗಳಾದ ಮುಹಮ್ಮದ್ ಷರೀಫ್, ಉಸ್ಮಾನ್ ಬೊಂಬಾಯಿಕರ್, ಅಬ್ದುಲ್ಲಾ ಡಾಂಗಿ, ಅತೀಖುರ್ರಹ್ಮಾನ್ ಘಾರೊ, ಜಾಫರ್ ತಡಲಿಕರ್, ಖಲೀಲ್ ಪಾನಿ ಬುಡ್ಡೋ, ನಯೀಂ ಭಂಡಿ, ಇಬ್ರಾಹೀಂ ಮುಲ್ಲಾ, ಎಂ.ಅನ್ಸಾರ್ ಬಾಬು, ಕುಮಟಾ ತಾಲೂಕಿನ ಯಾಕೂಬ್ ಶಮಾಲಿ, ಇಲ್ಯಾಸ್ ಅಂಬಾಡಿ, ಇನಾಯತ್ ಶಮಾಲಿ, ಇಲ್ಯಾಸ್ ಘಾರೋ, ಅಜ್ಮಲ್ ಶಮಾಲಿ, ಇಬ್ರಾಹೀಂ ಹೂಡೆಕರ್, ಹೊನ್ನಾವರ ತಾಲೂಕಿನ ಮಂಕಿಯ ಮತ್ಲೂಬ್ ಸಾರಂಗ್, ಅಂಕೋಲಾ ತಾಲೂಕಿನ ಖಾಸಿಮ್ ಶೇಖ್ ಮತ್ತು ಶಿರೂರಿನ ಅಬ್ದುಲ್ ಹುಸೇನ್ ಸುರಕ್ಷಿತವಾಗಿ ತಲುಪಿದ್ದಾರೆ.

ಬುಧವಾರ ರಾತ್ರಿ ದುಬೈನ ಜುಮೈರಾ ಬಂದರ್ ತಲುಪಿದ ಇವರನ್ನು ಅವರ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳು ಸಂತೋಷದಿಂದ ಬರಮಾಡಿಕೊಂಡರು.

ತಾಯ್ನಾಡಿಗೆ ಮರಳುವ ತವಕ: ದುಬೈಯಿಂದ ದೂರವಾಣಿಯಲ್ಲಿ ಮಾತನಾಡಿದ ಉಸ್ಮಾನ್ ಬೊಂಬಾಯಿಕರ್ ತನ್ನ ತಾಯ್ನಾಡಿಗೆ ಆದಷ್ಟು ಬೇಗ ಮರಳುವ ತವಕವನ್ನು ವ್ಯಕ್ತಪಡಿಸಿದ್ದು, ಮನೆಯಲ್ಲಿ ತಾಯಿ ಹಾಗೂ ಸಹೋದರರನ್ನು ಕಾಣಬೇಕೆಂದು ಬಹುದಿನಗಳ ಕನಸು ಈಗ ನನಸಾಗುತ್ತಿದೆ. ನಮ್ಮೆಲ್ಲರನ್ನು ಸುರಕ್ಷಿತವಾಗಿ ಮರಳುವಂತೆ ಮಾಡಿದ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News