ಮೈಸೂರು ಹಂಗಾಮಿ ಜಿಪಂ ಅಧ್ಯಕ್ಷರಾಗಿ ಸಾ.ರಾ ನಂದೀಶ್ ಅಧಿಕಾರ ಸ್ವೀಕಾರ

Update: 2019-01-10 17:39 GMT

ಮೈಸೂರು,ಜ.10: ಹಿಂದಿನ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹ್ಮದ್ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸಾ.ರಾ ಮಹೇಶ್ ಸಹೋದರ ಸಾ.ರಾ ನಂದೀಶ್ ಅವರು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಹಂಗಾಮಿ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಸಾ.ರಾ. ನಂದೀಶ್ ಅವರು ಗುರುವಾರ ಅಧಿಕೃತವಾಗಿ ಜಿ.ಪಂ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಹಂಗಾಮಿ ಅಧ್ಯಕ್ಷರಿಗೆ ಪಕ್ಷದ ಕಾರ್ಯಕರ್ತರ ಅಭಿನಂದನೆಗಳ ಮಹಾಪೂರವೇ ಹರಿದು ಬಂತು. ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ನಾಮಫಲಕವನ್ನು ಬದಲಾಯಿಸಿದ್ದು, ಮುಂಬರುವ ಅಧ್ಯಕ್ಷರ ಆಯ್ಕೆ ಚುನಾವಣೆಗೂ ಬಿಜೆಪಿ ಜೊತೆಗೆ ಹೊಂದಾಣಿಕೆಗೆ ಒಲವು ತೋರಿದ್ದಾರೆ.

ಈ ಸಂದರ್ಭ ಮಾತನಾಡಿದ ಅವರು ಜಿ.ಪಂ.ನ ಹಳೇ ದೋಸ್ತಿ ಮುಂದುವರಿಸಲು ಜೆಡಿಎಸ್ ನ ಎಲ್ಲ ಸದಸ್ಯರ ಬಯಕೆಯಿದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೂ ಕೂಡಾ ಮನವರಿಕೆ ಮಾಡುತ್ತೇವೆ. ನಮ್ಮ ಮನವಿಗೆ ಜೆಡಿಎಸ್ ಪಕ್ಷದ ವರಿಷ್ಠರು ಸ್ಪಂದಿಸುವ ವಿಶ್ವಾಸವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇದ್ದರೂ ಕೂಡಾ ಈ ಹಿಂದೆ ಬಿಜೆಪಿ ಹೊಂದಾಣಿಕೆ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲೂ ಜಿ.ಪಂ ನಲ್ಲಿ ಬಿಜೆಪಿ ಜೊತೆ ಕೈಜೋಡಿಸಲಿದ್ದೇವೆ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ. ಹಾಗಾಗಿ ಮೈಸೂರಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುತ್ತೇವೆ ಎಂದರು. ಮೈಸೂರು ಜಿಲ್ಲೆಯ ಅಭಿವೃದ್ಧಿ ಪ್ರಮುಖ ಗುರಿಯಾಗಿದ್ದು, ಪಕ್ಷ ಭೇದ ಮರೆತು ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News