ಅರೆಕೆರೆ ಬಳಿ 8000 ಮೆಟ್ರಿಕ್ ಟನ್ ಅಕ್ರಮ ಮರಳು ವಶ: ಕಾನೂನು ಕ್ರಮಕ್ಕೆ ಡಿ.ಸಿ. ಸುಚನೆ

Update: 2019-01-10 17:44 GMT

ಹಾಸನ, ಜ. 10: ಸೂಕ್ತ ದಾಖಲೆ ಹಾಗೂ ರಾಯಲ್ಟಿಯನ್ನು ಪಾವತಿಸದೆ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 8000 ಮೆಟ್ರಿಕ್ ಟನ್ ಮರಳನ್ನು ಹಾಗೂ ವಾಹನ ಮತ್ತು ಜನರೇಟರ್ ಸೆಟ್ ಅನ್ನು ಸಕಲೇಶಪುರ ತಾಲೂಕಿನ ಅರೆಕೆರೆ ಬಳಿ ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಅಕ್ರಮ ಮರಳು ವಶಪಡಿಸಿಕೊಂಡು ಕಾನೂನು ರೀತಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.

ಓಷನ್ ಎಂಬ ಖಾಸಗಿ ಗುತ್ತಿಗೆದಾರ ಸಂಸ್ಥೆಯವರು ಅಕ್ರಮವಾಗಿ ಈ ದಾಸ್ತಾನು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಓಷನ್ ಕಂಪನಿಯ ಸೈಟ್ ಇಂಜಿನಿಯರ್ ಜಹೀರ್ ಉದ್ತಾನ್ ಅವರು ಮರಳು ದಾಸ್ತಾನಿಗೆ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲರಾದರು.

ಯಾವುದೇ ಪರವಾನಗಿ ಇಲ್ಲದೆ ಸ್ಥಳೀಯವಾಗಿ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬರುತ್ತಿದೆ ಯಾವುದೇ ರಾಜಧರ್ಮವನ್ನು ರಾಯಲ್ಟಿಯನ್ನು ಪಾವತಿಸದೆ  ಸರ್ಕಾರಕ್ಕೆ ತೆರಿಗೆಯನ್ನು ವಂಚಿಸಿರುವುದು ಕಂಡು ಬಂದಿದ್ದು ಕಾನೂನು ರೀತಿಯಲ್ಲಿ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಯವರು ಸಕಲೇಶಪುರ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು.

ಓಷನ್ ಕಂಪನಿ ವಿರುದ್ದ ಎಫ್.ಐ.ಆರ್ ದಾಖಲಿಸಿ 8000 ಮೆಟ್ರಿಕ್ ಟನ್ ಮರಳು ಹಾಗೂ ಇಟಾಚಿ ವಾಹನವನ್ನು ವಶಕ್ಕೆ ತೆಗೆದುಕೊಂಡು ರಾಯಲ್ಟಿ ಮೇಲೆ ಐದು ಪಟ್ಟು ದಂಡ ವಿಧಿಸುವಂತೆ ನಿರ್ದೇಶನ ನೀಡಿದರು.

ಖಾಸಗಿ ಜಮೀನನ್ನು ಇದಕ್ಕಾಗಿ ಬಳಸಲಾಗಿದೆ ಇದನ್ನು ಯಾವರೀತಿ ಬಾಡಿಗೆ ಪಡೆಯಲಾಗಿದೆ ಎಂಬುದನ್ನು ಪರಿಶೀಲಿಸುವಂತೆ ಅವರು ಹೇಳಿದರು.

ಎಲ್ಲಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರಳನ್ನು ತಂದು ಸಂಗ್ರಹಿಸಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಓಷನ್ ಸಂಸ್ಥೆ ಎತ್ತಿನ ಹೊಳೆ ಯೋಜನೆ ಕಾಮಗಾರಿಗಳ ಗುತ್ತಿಗೆಯನ್ನು ಪಡೆದಿದ್ದ ಸಂಬಂಧಪಟ್ಟ ಇಂಜನಿಯರ್‍ಗಳು ಇದನ್ನು ಪರಿಶೀಲಿಸುವ ಜವಾಬ್ದಾರಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. 

ಜಿಲ್ಲೆಯಲ್ಲಿ ಮರಳಿನ ಕೊರತೆ ಇಲ್ಲ ಆದರೆ ಇಂತಹ ಅಕ್ರಮಗಳಿಂದ ಕೃತಕ ಅಭಾವ ಸೃಷ್ಟಿಯಾಗಬಹುದು ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಠಿಣ ಕ್ರಮ ವಹಿಸಿದೆ. ಮೈಸೂರು ಮಿನರಲ್ ಮೂಲಕ ಕೆಲವೊಂದು ಬ್ಲಾಕ್‍ಗಳ ಮರಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ತಹಶೀಲ್ದಾರ್ ನಾಗಭೂಷನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀನಿವಾಸ್, ಎತ್ತಿನ ಹೊಳೆ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತಿಮ್ಮೇಗೌಡ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News