ಕೊಲೆ ಯತ್ನ: ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ

Update: 2019-01-10 18:02 GMT

ಮೈಸೂರು,ಜ.10: ಪತ್ನಿಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದ ಎಂದು ಆರೋಪಿಸಿ ವ್ಯಕ್ತಿಯೋರ್ವರಿಗೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳಿಗೆ ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ತಲಾ ಹತ್ತು ಸಾವಿರ ರೂ.ದಂಡ ವಿಧಿಸಿದೆ.

ತಿ.ನರಸೀಪುರದ ಚಂದ್ರಶೇಖರ್ ಮತ್ತು ಅವರ ಪುತ್ರ ನಾಗೇಂದ್ರ ಶಿಕ್ಷೆಗೊಳಗಾದವರಾಗಿದ್ದಾರೆ. ನಾಗೇಂದ್ರ ಎಂಬಾತ ರಾಜು ತನ್ನ ಪತ್ನಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಾನೆ ಎಂದು ಆರೋಪಿಸಿ ಜಗಳವಾಡಿದ್ದು, ಇದರಿಂದ ಪತ್ನಿ ಮಕ್ಕಳು ಮನೆ ಬಿಟ್ಟು ತೆರಳಿದ್ದರು. ತನ್ನ ಸಂಸಾರ ಹಾಳಾಗಲು ರಾಜು ಕಾರಣ ಎಂದು ಆರೋಪಿಸಿ 2013ರ ಮೇ.30ರಂದು ಹೋಟೆಲ್ ಒಂದರಲ್ಲಿ ರಾಜು ತನ್ನ ಸ್ನೇಹಿತನ ಜೊತೆ ಟೀ ಕುಡಿಯುತ್ತಿದ್ದ ವೇಳೆ ನಾಗೇಂದ್ರ ತನ್ನ ತಂದೆ ಚಂದ್ರಶೇಖರ್ ಜೊತೆ ಸೇರಿ ದಾಳಿ ಮಾಡಿ ರಾಜುವಿನ ಎಡಗೈಯನ್ನು ಚೂರಿಯಿಂದ ಕತ್ತರಿಸಿದ್ದ ಎನ್ನಲಾಗಿದೆ.

ತಪ್ಪಿಸಿಕೊಂಡು ಓಡುತ್ತಿದ್ದ ರಾಜುವನ್ನು ಓಡಿಸಿಕೊಂಡು ಹೋಗುವಾಗ ರಾಜು ಜೊತೆ ಆತನ ಸ್ನೇಹಿತನಿಗೂ ತೀವ್ರವಾಗಿ ಹಲ್ಲೆ ನಡೆಸಿದ್ದು, ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೃಷ್ಣಯ್ಯ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News