ನಷ್ಟದಲ್ಲಿ ಸೊರಗುವಂತೆ ಮಾಡಿ ಎಚ್‌ಎಎಲ್ ಮುಚ್ಚುಗಡೆಗೆ ಕೇಂದ್ರದ ಪಿತೂರಿ: ಎಚ್‌ಎಎಲ್ ಉದ್ಯೋಗಿಗಳ ಆರೋಪ

Update: 2019-01-11 06:54 GMT

ಹೊಸದಿಲ್ಲಿ,ಜ.10: ನರೇಂದ್ರ ಮೋದಿ ಸರಕಾರವು ಎಚ್‌ಎಎಲ್ ನಷ್ಟದಲ್ಲಿ ಸೊರಗುವಂತೆ ಮಾಡಿ ಅದರ ಮುಚ್ಚುಗಡೆಗೆ ಪಿತೂರಿ ನಡೆಸುತ್ತಿದೆ ಎಂದು ಸಂಸ್ಥೆಯ ಉದ್ಯೋಗಿಗಳು ಆರೋಪಿಸಿದ್ದಾರೆ ಎಂದು newsclick.in ವರದಿಮಾಡಿದೆ. ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಚ್‌ಎಎಲ್‌ನ್ನು ಡಸಾಲ್ಟ್ ಏವಿಯೇಷನ್‌ನ ಪಾಲುದಾರನನ್ನಾಗಿಸಬೇಕು ಮತ್ತು ತಂತ್ರಜ್ಞಾನ ವರ್ಗಾವಣೆ ವ್ಯವಸ್ಥೆ(ಟಿಒಟಿ)ಯಡಿ ಬಾಕಿ ಇರುವ 90 ರಫೇಲ್ ಯುದ್ಧವಿಮಾನಗಳ ತಯಾರಿಕೆಯ ಗುತ್ತಿಗೆಯನ್ನು ಸಂಸ್ಥೆಗೆ ನೀಡಬೇಕು ಎಂದೂ ಆಗ್ರಹಿಸಿದರು.

ಬೆಂಗಳೂರು ಎಚ್‌ಎಎಲ್‌ನ ಸುಮಾರು 10,000 ಉದ್ಯೋಗಿಗಳ ಪ್ರತಿನಿಧಿಗಳು ಎನ್ನಲಾಗಿರುವ ಈ ನೌಕರರು ಸುದ್ದಿಗೋಷ್ಠಿಗೆ ಮುನ್ನ ಕಾಂಗ್ರೆಸ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು.

ಡಸಾಲ್ಟ್ ಅಧ್ಯಕ್ಷರು ತಮ್ಮ ವಾರ್ಷಿಕ ವರದಿಯಲ್ಲಿ ಎಚ್‌ಎಎಲ್‌ನ್ನು ತಮ್ಮ ಪಾಲುದಾರನನ್ನಾಗಿ ಉಲ್ಲೇಖಿಸಿದ್ದರು ಮತ್ತು ಎಚ್‌ಎಲ್ ಈ ಬಗ್ಗೆ ಒಪ್ಪಂದವೊಂದಕ್ಕೂ ಸಹಿ ಮಾಡಿತ್ತು. 25 ಟನ್ ತೂಕದ ಸುಖೋಯ್ ವಿಮಾನವನ್ನು ನಿರ್ಮಿಸುವ ಎಚ್‌ಎಲ್‌ಗೆ ರಫೇಲ್ ವಿಮಾನಗಳ ತಯಾರಿಕೆ ದೊಡ್ಡದಲ್ಲ ಎಂದು ಅಖಿಲ ಭಾರತ ಎಚ್‌ಎಎಲ್ ಕಾರ್ಮಿಕ ಒಕ್ಕೂಟ ಸಮನ್ವಯ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ರೇಣುಕಾ ಎಸ್. ಹೇಳಿದರು.

36 ರಫೇಲ್ ವಿಮಾನಗಳ ಖರೀದಿಗಾಗಿ ಪುನರ್‌ನವೀಕರಣಗೊಳಿಸಲಾಗಿರುವ ಒಪ್ಪಂದದಲ್ಲಿ ಟಿಒಟಿ ನಿಬಂಧನೆಯನ್ನು ಸೇರಿಸದಿರುವ ನಿರ್ಧಾರವು 78 ವರ್ಷಗಳಷ್ಟು ಹಳೆಯದಾದ ಸರಕಾರಿ ಸ್ವಾಮ್ಯದ ಎಚ್‌ಎಎಲ್‌ನ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ ಎಂದ ಅವರು,ಎಚ್‌ಎಎಲ್‌ಗೆ 73,000 ಕೋ.ರೂ.ವೌಲ್ಯದ ಪೂರೈಕೆ ಆದೇಶಗಳನ್ನು ಸಲ್ಲಿಸಲಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ತಿಳಿಸಿರುವುದು ದಾರಿ ತಪ್ಪಿಸುವ ಹೇಳಿಕೆಯಾಗಿದೆ. ಎಚ್‌ಎಎಲ್‌ಬಳಿ ಈಗ 1.28 ಲ.ಕೋ.ರೂ.ಗಳ ಪೂರೈಕೆ ಆದೇಶಗಳಿದ್ದು, ಈ ಪೈಕಿ ಕೇವಲ 26,570 ಕೋ.ರೂ.ಗಳ ಆದೇಶಗಳು ಮೋದಿ ಸರಕಾರದಿಂದ ಬಂದಿವೆ. ಅಂದರೆ ಯುಪಿಎ ಸರಕಾರವು ಒದಗಿಸಿದ್ದ ಪೂರೈಕೆ ಆದೇಶಗಳಿಂದಲೇ ಎಚ್‌ಎಎಲ್ ನಡೆಯುತ್ತಿದೆ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News