ಚಾಮರಾಜನಗರ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ಗರ್ಭಿಣಿ ಬಲಿ: ಆರೋಪ

Update: 2019-01-11 13:01 GMT

ಚಾಮರಾಜನಗರ,ಜ.11: ಜಿಲ್ಲಾಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದ ನಂತರ ಗರ್ಭಿಣಿ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಸಂಬಂಧಿಕರು, ಆಸ್ಪತ್ರೆ ಮುಂದಿನ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದರು.

ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಗರ್ಭಿಣಿ ಮೃತಪಟ್ಟಿರುವುದಾಗಿ ಆರೋಪಿಸಿದ ಪ್ರತಿಭಟನಾಕಾರರು, ತಪ್ಪಿತಸ್ಥ ಸಿಬ್ಬಂದಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.

7 ತಿಂಗಳ ಗರ್ಭಿಣಿಯಾಗಿದ್ದ ನಗರದ ಅಂಬೇಡ್ಕರ್ ಬಡಾವಣೆಯ ಮಹದೇವ ಎಂಬುವರ ಪತ್ನಿ ನೇತ್ರಾವತಿ(25) ಗುರುವಾರ ಜಿಲ್ಲಾಸ್ಪತ್ರೆಗೆ ಆಗಮಿಸಿ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಬಳಿಕ ವೈದ್ಯರ ಸೂಚನೆಯಂತೆ ಚುಚ್ಚುಮದ್ದು ಪಡೆಯಲು ತೆರಳಿದ್ದರು. ಈಕೆ ಹೃದ್ರೋಗಿಯೂ ಆಗಿದ್ದರಿಂದ ಮೊದಲಿಗೆ ಪರೀಕ್ಷಾರ್ಥ ಚುಚ್ಚುಮದ್ದು ನೀಡಲಾಯಿತು. ನಂತರ ಪೂರ್ಣ ಪ್ರಮಾಣದ ಚುಚ್ಚುಮದ್ದು ನೀಡಿದಾಗ ಅಸ್ವಸ್ಥಗೊಂಡರು. ತಕ್ಷಣ ಆಕೆಯನ್ನು ತುರ್ತು ನಿಗಾ ಘಟಕಕ್ಕೆ ಕರೆದೊಯ್ಯು ಅರ್ಧ ಗಂಟೆ ಕಾಲ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟರು ಎನ್ನಲಾಗಿದೆ.

ವಿಷಯ ತಿಳಿದ ಬಡಾವಣೆ ನಿವಾಸಿಗಳು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನೇತ್ರಾವತಿ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್ಪಿ ಜಯಕುಮಾರ್, ಸಿಪಿಐ ರಾಜೇಂದ್ರ ಹಾಗೂ ಸಿಬ್ಬಂದಿ ಆಗಮಿಸಿ ಜನರನ್ನು ಸಮಾಧಾನಪಡಿಸಲು ಯತ್ನಿಸಿದರು.

ಪ್ರತಿಭಟನಾಕಾರರು ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಕುಳಿತು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು, ತಪ್ಪಿತಸ್ಥ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ವಹಿಸಬೇಕು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಪಟ್ಟುಹಿಡಿದರು.

ಜಿಲ್ಲಾ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ರಾಜೇಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಘುರಾಂ ಸರ್ವೆಗಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಅಹವಾಲು ಆಲಿಸಿದರು.

ಶವಪರೀಕ್ಷೆ ವರದಿ ಬಂದ ನಂತರ ಸಂಬಂಧಪಟ್ಟವರ ವಿರುದ್ಧ ಕ್ರಮ ವಹಿಸುವುದಾಗಿ ಎಡಿಸಿ ನೀಡಿದ ಭರವಸೆಯನ್ನು ಪ್ರತಿಭಟನಾಕಾರರು ತಿರಸ್ಕರಿಸಿದರು. ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.

8 ವರ್ಷಗಳಿಂದ ಹೃದಯ ಕಾಯಿಲೆ: ಮೃತ ನೇತ್ರಾವತಿ ಅವರಿಗೆ 8 ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿತ್ತು. 2 ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದ ಅವರಿಗೆ ಕಡಿಮೆ ತೂಕದ ಮಗು ಜನಿಸಿ ಮೃತಪಟ್ಟಿತ್ತು. ಹಿಂದಿನಿಂದಲೂ ಅವರು ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಇತರೆಡೆ ಚಿಕಿತ್ಸೆ ಪಡೆದಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿದ್ದರಿಂದ ಗರ್ಭ ಧರಿಸುವುದು ಬೇಡವೆಂದು ವೈದ್ಯರು ಸೂಚನೆ ನೀಡಿದ್ದರು. ಮಕ್ಕಳಿಲ್ಲ ಎಂಬ ಕಾರಣದಿಂದ ಗರ್ಭಿಣಿಯಾಗಿದ್ದರು. ಜಿಲ್ಲಾಸ್ಪತ್ರೆಗೆ ಆಗಮಿಸಿ ಚುಚ್ಚುಮದ್ದು ಪಡೆದ ನಂತರ ಮೃತಪಟ್ಟಿದ್ದಾರೆ. ಈ ಬಗ್ಗೆ ಆಕೆಯ ಸಂಬಂಧಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ .

- ಡಾ.ರಘರಾಂ ಸರ್ವೆಗಾರ್, ಜಿಲ್ಲಾ ಶಸ್ತ್ರಚಿಕಿತ್ಸಕ 

ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡಿಲ್ಲ. ಚುಚ್ಚುಮದ್ದು ನೀಡಿದ ತಕ್ಷಣ ನೇತ್ರಾವತಿ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆದ್ದರಿಂದ ಅವರ ವಿರುದ್ಧ ಕ್ರಮ ಜರುಗಿಸಬೇಕು.

-ಮೃತರ ಸಂಬಂಧಿ

ನೇತ್ರಾವತಿಯವರು ಆಸ್ಪತ್ರೆಗೆ ತಪಾಸಣೆಗೆ ಬಂದ ತಕ್ಷಣ ಅವರ ಈ ಹಿಂದಿನ ಆರೋಗ್ಯ ವರದಿ ಗಮನಿಸಿ, ಚಿಕಿತ್ಸೆ ನೀಡಲಾಗಿದೆ. ಅವರಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದ ಪರಿಣಾಮ ಕಾಳಜಿ ವಹಿಸಿ ಪರೀಕ್ಷಾರ್ಥ ಚುಚ್ಚು ಮದ್ದು ನೀಡಿ, ನಂತರ ಪೂರ್ಣಪ್ರಮಾಣದ ಇಂಜೆಕ್ಷನ್ ನೀಡಲಾಗಿದೆ. ಅವರು ಪ್ರಜ್ಞೆ ತಪ್ಪಿದ ನಂತರವೂ ಅರ್ಧತಾಸು ಅಗತ್ಯ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿ ಆಗಲಿಲ್ಲ.

- ಡಾ.ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ, ಜಿಲ್ಲಾಸ್ಪತ್ರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News