ಚಿಕ್ಕಮಗಳೂರು: ಪಾಳು ಬಿದ್ದ ಕಟ್ಟಡದಲ್ಲಿ ಟ್ಯಾಕ್ಸಿ ಚಾಲಕನ ಮೃತ ದೇಹ ಪತ್ತೆ; ಕೊಲೆ ಶಂಕೆ

Update: 2019-01-11 13:49 GMT

ಚಿಕ್ಕಮಗಳೂರು, ಜ.11: ನಗರದ ಹೃದಯ ಭಾಗದಲ್ಲಿರುವ ಪಾಳು ಬಿದ್ದ ಕಟ್ಟಡವೊಂದರಲ್ಲಿ ನಾಪತ್ತೆಯಾಗಿದ್ದ ಟ್ಯಾಕ್ಸಿ ಚಾಲಕನೋರ್ವನ ಮೃತ ದೇಹ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಚಾಲಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಟ್ಯಾಕ್ಸಿ ಚಾಲಕನನ್ನು ಸಿದ್ದಲಿಂಗಸ್ವಾಮಿ(35) ಎಂದು ಗುರುತಿಸಲಾಗಿದ್ದು, ನಗರದ ಕೆಂಪನಹಳ್ಳಿ ನಿವಾಸಿಯಾಗಿರುವ ಈತ ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಮೃತ ಸಿದ್ದಲಿಂಗಸ್ವಾಮಿ ಪತ್ನಿ ಹಾಗೂ ಓರ್ವ ಮಗನನ್ನು ಹೊಂದಿದ್ದಾರೆ.

ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಹಳೇ ಜೈಲಿನ ಪಾಳು ಬಿದ್ದ ಕಟ್ಟಡದಲ್ಲಿ ಸಿದ್ದಲಿಂಗಸ್ವಾಮಿ ಅವರ ಮೃತ ದೇಹ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಮೃತ ವ್ಯಕ್ತಿ ಜ.5ರಂದು ಕೆಲಸದ ನಿಮಿತ್ತ ಮನೆಯಿಂದ ಹೊರ ಬಂದವರು ಪುನಃ ಮನೆಗೆ ಬಾರದೇ ನಾಪತ್ತೆಯಾಗಿದ್ದ ಎಂದು ಹೇಳಲಾಗುತ್ತಿದ್ದು, ಶುಕ್ರವಾರ ಆತನ ಮೃತ ದೇಹ ಟ್ಯಾಕ್ಸಿ ನಿಲ್ದಾಣದ ಸಮೀಪದ ಪಾಳು ಬಿದ್ದ ಕಟ್ಟದಲ್ಲಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಕಳೆದೊಂದು ತಿಂಗಳಿನಿಂದ ಸಿದ್ದಲಿಂಗಸ್ವಾಮಿ ತನ್ನ ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡಿಕೊಂಡಿದ್ದ ಎಂದು ಆತನ ಸ್ನೆಹಿತರು ಹೇಳಿಕೆ ನೀಡಿದ್ದು, ಆತನ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿದ್ದ ಪತ್ನಿ ಸಂಬಂಧಿಕರು ಹಣವನ್ನು ಎಫ್‍ಡಿ ಇಟ್ಟಿದ್ದರು. ಈ ಹಣದ ವಿಚಾರ ಸಂಬಂಧ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸಿದ್ದಲಿಂಗಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಮೃತ ದೇಹದ ಮೇಲೆ ಗಾಯದ ಗುರುತುಗಳಿದ್ದು, ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿರಬಹುದೆಂದು ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶವ ಮರಣೋತ್ತರ ಪರೀಕ್ಷೆ ನಡೆಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿರುವ ಹಳೇ ಜೈಲು ಕಟ್ಟಡ

ಸರಕಾರಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹಳೇ ಜೈಲು ಕಟ್ಟಡ ಇರುವ ಜಾಗ ಪಾಳು ಬಿದ್ದರುವುದರಿಂದ ಈ ಜಾಗ ಕಿಡಿಗೇಡಿಗಳ ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜಾಗವಾಗಿ ಮಾರ್ಪಟ್ಟಿದೆ. ಈ ಜಾಗವನ್ನು ಬಸ್ ನಿಲ್ದಾಣ ವಿಸ್ತರಣೆಗೆ ನೀಡಲಾಗಿದೆ. ಆದರೆ ಇದುವರೆಗೂ ವಿಸ್ತರಣೆ ಕೆಲಸ ಆಗಿಲ್ಲ. ಹಿಂದೆ ಜೈಲಾಗಿದ್ದ ಈ ಕಟ್ಟಡ ಸದ್ಯ ಪಾಳು ಬಿದ್ದಿದ್ದು ಭೂತ ಬಂಗಲೆಯಂತಾಗಿದೆ.

ಕಟ್ಟಡವನ್ನು ಒಡೆಯದಿರುವುದರಿಂದ ರಾತ್ರಿ ವೇಳೆ ಈ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಕಟ್ಟಡವನ್ನು ನೆಲಸಮ ಮಾಡಿದ್ದರೆ ಇಂತಹ ಚಟುವಟಿಕೆ ನಡೆಯುತ್ತಿರಲಿಲ್ಲ. ಕಟ್ಟಡವನ್ನು ಸಂಬಂಧಿಸಿದ ಇಲಾಖೆಯವರು ಒಡೆಯದೇ ಬಿಟ್ಟಿರುವುದರಿಂದ ಇಸ್ಪೀಟು, ಮದ್ಯಪಾನದಂತಹ ಅನೈತಿಕ ಚಟುವಟಿಕೆಗಳು ಇಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಪಾಳು ಕಟ್ಟಡವನ್ನು ಶೀಘ್ರ ಒಡೆದು ಬಸ್ ನಿಲ್ದಾಣ ವಿಸ್ತರಣೆ ಮಾಡಬೇಕು. ಇಲ್ಲದಿದ್ದರೆ ಈ ಜಾಗ ಕಿಡಿಗೇಡಿಗಳ ಅಡ್ಡೆಯಾಗಲಿದೆ.

- ಚಂದ್ರಶೇಖರ್, ಬಸ್ ನಿಲ್ದಾಣ ಸಮೀಪದ ವ್ಯಾಪಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News