ಹಾಸನ: ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಚುರುಕುಗೊಳಿಸಲು ದೇವೇಗೌಡ ಸೂಚನೆ

Update: 2019-01-11 14:11 GMT

ಹಾಸನ, ಜ.11: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ಜೊತೆಗೆ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸುವಂತೆ ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯರಾದ ಎಚ್.ಡಿ. ದೇವೇಗೌಡ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ನ ಹೊಯ್ಸಳ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಅಭಿವೃದ್ದಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬರಪರಿಸ್ಥಿತಿ ಇದ್ದು ಯಾವುದೇ ಗ್ರಾಮವು ಕುಡಿಯುವ ನೀರಿನ ಪೂರೈಕೆಯಿಂದ ವಂಚಿತವಾಗದಂತೆ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಗೆ ಈ ಬಾರಿ ರಾಜ್ಯಾ ಸರ್ಕಾರದಿಂದ ಸಾಕಷ್ಟು ಅನುದಾನ ಲಭ್ಯವಾಗಿದ್ದು, ಅವುಗಳ ಅನುಷ್ಠಾನಕ್ಕೆ ಪೂರಕವಾಗಿ ಕಚ್ಚಾ ವಸ್ತುಗಳಾದ ಜಲ್ಲಿ, ಎಂ.ಸ್ಯಾಂಡ್ ಮತ್ತು ಮರಳು ದೊರೆಯುವಂತೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕು, ಆ ಮೂಲಕ ಜಿಲ್ಲೆಯ ಅಭಿವೃದ್ಧಿ ಚುರುಕುಗೊಳ್ಳಿಸಬೇಕು ಎಂದು ದೇವೇಗೌಡರು ತಿಳಿಸಿದರು.

ಇದೇ ವೇಳೆ-ಅರಸೀಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ ಕಚ್ಚಾ ಸಾಮಗ್ರಿಗಳ ಕೊರತೆಯಿಂದ ಅನೇಕ ಕಾಮಗಾರಿಗಳ ಪ್ರಗತಿ ಕುಂಠಿತವಾಗಿದೆ ನಿಯಮ ಬದ್ದವಾಗಿರುವ ಕ್ವಾರಿಗಳಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿ ಸುಲಭವಾಗಿ ಜಲ್ಲಿ ಸಿಗುವಂತೆ ಮಾಡಿ  ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಪ್ರತಿಕ್ರಿಯೆ ನೀಡಿ ಎಲ್ಲಾ ಕ್ರಮ ಬದ್ದ ಕಲ್ಲು ಗಣಿ ಪ್ರದೇಶಗಳಿಗೆ ಅನುಮತಿ ನೀಡಲಾಗಿದೆ ಅದರೆ ನಿಯಮ ಉಲ್ಲಂಘನೆಗಳ ಮೇಲೆ ನಿಗಾವಹಿಸಲಾಗುತ್ತಿದೆ ಕೆಲವು ಕಡೆಗಳಲ್ಲಿ ರಸ್ತೆಕಾಮಗಾರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಯಾನುಸಾರವೇ ಮಾಡಬೇಕಾಗಿರುವುದರಿಂಧ ಕಾಲಾವಕಾಶ ಬೇಕಾಗುತ್ತಿದೆ ಎಂದರು.

ಇದೇ ವೇಳೆ ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಬೇಲೂರು ತಾಲ್ಲೂಕುಗಳನ್ನು ಬರಪೀಡಿತ ಕೆಲವು ಹೋಬಳಿಗಳಲ್ಲಿನ ತೀವ್ರ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ ಮತ್ತು ಕೆ.ಎಸ್.ಲಿಂಗೇಶ್ ಅವರು ಹೆಚ್ಚಿನ ಅನುದಾನಕ್ಕೆ ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ, ಶಾಸಕರಾದ ಕೆ.ಎಸ್. ಲಿಂಗೇಶ್, ಸಿ.ಎನ್. ಬಾಲಕೃಷ್ಣ ,  ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News