ಹೊಸ ಶಿಕ್ಷಣ ನೀತಿ ಶೀಘ್ರದಲ್ಲಿಯೇ ಜಾರಿಗೆ: ಶಮೀಮ್ ತಾಜ್

Update: 2019-01-11 18:09 GMT

ದಾವಣಗೆರೆ, ಜ.11: ಭಾಷೆ, ವಿಷಯ ಹಾಗೂ ವಿವಿಧ ವೃತ್ತಿ ಕೌಶಲ್ಯ ಕಲಿಸುವುದು ಸೇರಿದಂತೆ ಎಲ್ಲ ಶಿಕ್ಷಕರ ಸಹಯೋಗದೊಂದಿಗೆ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಉಪನಿರ್ದೇಶಕಿ ಎಚ್.ಎ.ಶಮೀಮ್ ತಾಜ್ ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಇವರ ವತಿಯಿಂದ ಶುಕ್ರವಾರ ಬೆಳಗ್ಗೆ ಪಿ.ಬಿ.ರಸ್ತೆಯಲ್ಲಿರುವ ಶ್ರೀಮದ್ ಅಭಿನವ ರೇಣುಕಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಪ್ರೌಢಶಾಲಾ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತುಪ್ರದರ್ಶನ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇದುವರೆಗೆ ವೃತ್ತಿ, ದೈಹಿಕ ಶಿಕ್ಷಣ, ಚಿತ್ರಕಲೆ, ಸಂಗೀತ ಶಿಕ್ಷಕರನ್ನು ‘ಪಾರ್ಟ್ ಬಿ’ ಎಂಬ ವರ್ಗೀಕರಣ ಮಾಡಿದ್ದು, ಹೊಸ ಶಿಕ್ಷಣ ನೀತಿಯಿಂದ ಇತರ ವಿಷಯ ಮತ್ತು ಭಾಷಾ ಶಿಕ್ಷಕರಂತೆ ಸಮಾನ ಪ್ರಾಮುಖ್ಯತೆ ದೊರಕಲಿದೆ. ಪ್ರಸ್ತುತ 1986ರ ಶಿಕ್ಷಣ ನೀತಿಯನ್ವಯ ಇಲಾಖೆಯ ಕೆಲಸಗಳು ನಡೆಯುತ್ತಿದ್ದು, ಹೊಸ ಶಿಕ್ಷಣ ನೀತಿ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದರು.

ಮಹಾತ್ಮಾ ಗಾಂಧಿಯವರಿಂದಲೇ ವೃತ್ತಿಕೌಶಲ್ಯಕ್ಕೆ ಒಂದು ಅರ್ಥ ಬಂದಿದೆ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಕೌಶಲ್ಯ, ಪ್ರತಿಭೆಯನ್ನು ಹೊರಹಾಕುವುದೇ ಶಿಕ್ಷಣ ಎಂದಿದ್ದಾರೆ ಗಾಂಧೀಜಿಯವರು. ನಿರುದ್ಯೋಗ ಸಮಸ್ಯೆಯನ್ನು ವೃತ್ತಿಕೌಶಲ್ಯವೆಂಬ ಮೂಲಶಿಕ್ಷಣದಿಂದ ನೀಗಿಸಬಹುದು. ಮಾಡುತ್ತಾ ಕಲಿಯುವುದು, ಕಲಿಯುತ್ತಾ ದುಡಿಯುವುದು ಹೀಗೆ ವೃತ್ತಿ ಕೌಶಲ್ಯದಿಂದ ಹೇಗೆ ಕಲಿಕೆ ಜೊತೆಗೆ ದುಡಿಮೆಯನ್ನೂ ಮಾಡಬಹುದೆಂದು ಗಾಂಧೀಜಿಯವರ ವೃತ್ತಿ ಕೌಶಲ್ಯ ಪರಿಕಲ್ಪನೆಯು ತಿಳಿಸುತ್ತದೆ ಎಂದರು.

 ವೃತ್ತಿಶಿಕ್ಷಕರು ಮಕ್ಕಳ ಜೀವನದ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿದ್ದಾರೆ. ಕೌಶಲ್ಯದಿಂದ ಧನಾತ್ಮಕ ಆಲೋಚನೆಗಳು ಹೆಚ್ಚಿ ವೈಜ್ಞಾನಿಕ ಮನೋಭಾವ ಮೂಡುವಲ್ಲಿ ಸಹಕಾರಿಯಾಗುತ್ತದೆ ಹಾಗೂ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯವನ್ನು ಇದು ವೃದ್ಧಿಸುತ್ತದೆ, ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದರು.

ಡಯಟ್ ಪ್ರಾಂಶುಪಾಲ ಎಚ್.ಕೆ.ಲಿಂಗರಾಜು ಮಾತನಾಡಿ, ವೃತ್ತಿಶಿಕ್ಷಕರು ವೃತ್ತಿಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಶಿಕ್ಷಣ ಎಂದರೆ ಕೇವಲ ಮಕ್ಕಳಲ್ಲಿ ಬುದ್ಧಿ ತುಂಬುವುದಲ್ಲ. ಬದಲಾಗಿ ಬುದ್ಧಿಯ ಬಾಗಿಲುಗಳನ್ನು ತೆರೆಯುವುದಾಗಿದೆ ಎಂದರು. ಮಹಾಪೌರೆ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಮಕ್ಕಳು ಕಲಿಯಬೇಕಾಗಿರುವುದು ಬೆಟ್ಟದಷ್ಟಿದೆ. ಕೇವಲ ಪಠ್ಯ ಶಿಕ್ಷಣಕ್ಕಲ್ಲದೆ ವೃತ್ತಿಶಿಕ್ಷಣ ಕೌಶಲ್ಯವನ್ನು ಪ್ರೋತ್ಸಾಹಿಸಬೇಕು. ಗ್ರಾಮೋದ್ಯೋಗ, ಕರಕುಶಲತೆ, ವೃತ್ತಿಶಿಕ್ಷಣ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಿದ್ದು, ಇಂತಹ ಚಟುವಟಿಕೆಗಳು ಮತ್ತು ಪ್ರದರ್ಶನದ ಮೂಲಕ ಜೀವಂತವಾಗಿಡಬೇಕೆಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಕರಕುಶಲ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು. ಮನಪಾ ಉಪ ಆಯುಕ್ತ ಚಮನ್ ಸಾಬ್, ಪ್ರಾಥಮಿಕ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಗಿರಿಯಪ್ಪ, ಪ್ರೌಢಶಿಕ್ಷಕ ಸಂಘದ ಶಿವಾನಾಯ್ಕ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಭೂಷಣ್, ವೃತ್ತಿ ಶಿಕ್ಷಣ ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕಿ ಸಿದ್ದಮ್ಮ, ಇತರ ಪದಾಧಿಕಾರಿಗಳಾದ ಸಿದ್ದರಾಮಯ್ಯ, ಜಯಶಂಕರ್, ಶಿವಶಂಕರಪ್ಪ, ಮಲ್ಲಯ್ಯ, ಯಲ್ಲಪ್ಪ, ಅಧಿಕಾರಿಗಳು, ಶಿಕ್ಷಕ ವೃಂದದವರು ನೌಕರರು, ಪ್ರಾಥಮಿಕ, ಪ್ರೌಢ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

2019-20 ನೇ ಸಾಲಿಗೆ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ‘ಹ್ಯಾಂಡ್‌ಬುಕ್ ಟು ಟೀಚರ್ಸ್‌ ’ ಎಂಬ ಪುಸ್ತಕವನ್ನು ಈ ಸಾಲಿನ ಜೂನ್ ಹೊತ್ತಿಗೆ ಶಿಕ್ಷಕರಿಗೆ ನೀಡಲಾಗುವುದು. ವೃತ್ತಿಶಿಕ್ಷಕರಿಗೆ ಹೊಸ ಪೇ ಸ್ಕೇಲ್ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ವೃತ್ತಿ ಶಿಕ್ಷಕರ ವಿಭಾಗದಲ್ಲಿ ಬಿಇಒ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರ 2 ಹುದ್ದೆಗಳನ್ನು ಶೀಘ್ರದಲ್ಲಿಯೇ ತುಂಬಲಾಗುವುದು.

ಎಚ್.ಎ.ಶಮೀಮ್ ತಾಜ್

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಉಪನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News