ಮೂಡಿಗೆರೆ: ಪ್ರವಾದಿ ನಿಂದನೆ ಖಂಡಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

Update: 2019-01-12 11:52 GMT

ಮೂಡಿಗೆರೆ, ಜ:12: ದೇಶದ ಸಂವಿಧಾನವನ್ನು ಎತ್ತಿಹಿಡಿದು ಸಮಾಜದ ಸಂಸ್ಕೃತಿ ಕಾಪಾಡಬೇಕಿದ್ದ ಸುದ್ದಿ ದೃಶ್ಯ ಮಾಧ್ಯಮವೊಂದು ಪ್ರವಾದಿ ಮುಹಮ್ಮದ್ (ಸ) ರನ್ನು ನಿಂದಿಸಿ ತನ್ನ ಕೋಮುವಾದದ ಅಸಲಿ ಮುಖವನ್ನು ತೋರಿಸುವ ಮೂಲಕ ಶಾಂತಿಗೆ ಭಂಗ ತರುವ ಕೆಲಸದಲ್ಲಿ ತೊಡಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಮುಹಮ್ಮದ್ ಮುಝಾಫರ್ ಕಿಡಿಕಾರಿದರು.

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಪ್ರವಾದಿ ನಿಂದನೆ ಖಂಡಿಸಿ ಶನಿವಾರ ಪಟ್ಟಣದ ಲಯನ್ಸ್ ವೃತ್ತದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ವಾಹಿನಿಯಲ್ಲಿ ನಿರೂಪಕನಾಗಿ ಕರ್ತವ್ಯ ನಿರ್ವಹಿಸಿ ತನ್ನ ಪಾಡಿಗಿರುವುದು ಬಿಟ್ಟು, ನಿರೂಪಕ ಅಜಿತ್ ಹನುಮಕ್ಕನವರ್ ಎಂಬಾತ ಪ್ರವಾದಿಯವರಿಗೆ ಸಂಬಂದವೇ ಇಲ್ಲದ ವಿಷಯದ ಚರ್ಚೆಯೊಂದರಲ್ಲಿ ಪ್ರವಾದಿಯವರನ್ನು ನಿಂದಿಸಿ ಪೌರುಷ ಮೆರೆಯಲು ಮುಂದಾಗಿದ್ದಾನೆ. ಇಂತಹ ನಿರೂಪಕನಿರುವ ವಾಹಿನಿಯನ್ನು ಜನತೆ ತಿರಸ್ಕರಿಸಬೇಕು ಎಂದು ಹೇಳಿದರು.

ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ಮುಸ್ಲಿಮರಿಗೆ ಸಂಬಂಧವಿಲ್ಲದ ಪ್ರೊ.ಭಗವಾನ್ ಅವರ ಹೇಳಿಕೆ ಕುರಿತು ವಾಹಿನಿಯೊಂದರಲ್ಲಿ ಚರ್ಚೆ ನಡೆಸುವ ವೇಳೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ಗುರಿಯಾಗಿಸಿಕೊಂಡು ನಿಂದಿಸಿ ಮುಸ್ಲಿಮರ ತಾಳ್ಮೆಯನ್ನು ಅಜಿತ್ ಹನುಮಕ್ಕನವರ್ ಪರೀಕ್ಷಿಸಿದ್ದಾನೆ. ಪ್ರವಾದಿ ನಿಂದನೆಯನ್ನು ಸಹಿಸಲು ಮುಸ್ಲಿಂ ಸಮುದಾಯಕ್ಕೆ ಸಾಧ್ಯವಿಲ್ಲ. ಹಾಗಾಗಿ ರಾಜ್ಯದ ಎಲ್ಲಾ ಪೂಲೀಸ್ ಠಾಣೆಗಳಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ದೂರು ನೀಡಲಾಗಿದೆಯಾದರೂ ನಿರೂಪಕನ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಸುಮಾರು ನಾಲ್ಕು ಸಾವಿರ ಮಂದಿ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗು ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. 

ಈ ವೇಳೆ ಕರ್ನಾಟಕ ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್, ಪಟ್ಟಣದ ಜದೀದ್ ಮಸೀದಿಯ ಹಝ್ರತ್ ಮೌಲಾನಾ ವಾಜಿದ್ ಅಲಿ, ಮುಖಂಡರಾದ ಎ.ಸಿ.ಅಯ್ಯೂಬ್ ಹಾಜಿ, ಸುಲೈಮಾನ್ ಕೃಷ್ಣಾಪುರ, ಪಿಶ್ ಮೋಣು, ಅಹಮ್ಮದ್ ಬಾವ ಬಿಳಗುಳ, ಬಿ.ಎಚ್ ಮೊಹಮ್ಮದ್, ಯಾಕೂಬ್ ಚಕಮಕ್ಕಿ, ಸಿ.ಕೆ.ಇಬ್ರಾಹಿಂ, ಅಜ್ಮಲ್ ಬಿದ್ರಹಳ್ಳಿ, ಜುಬೇರ್, ಅಲ್ತಾಫ್ ಹುಸೇನ್, ಹುಸೈನಿ ಪಾಷಾ, ಅಬ್ರಾರ್ ಬಿದರಳ್ಳಿ, ಇಬ್ರಾಹಿಂ ಶಾಲಿಮಾರ್, ಮುಹಮ್ಮದ್ ಅಲಿ ಬಣಕಲ್, ಬಿ.ಎ.ಉಮ್ಮರ್, ಶಾಕೀರ್ ಹುಸೇನ್ ಆಲ್ದೂರು, ಉಮ್ಮರಬ್ಬ ಹಂಡುಗುಳಿ ಅಶ್ರಫ್ ಅಣಜೂರು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News