ಕೊಡಗು ಪ್ರವಾಸಿ ಉತ್ಸವ: ಗಮನ ಸೆಳೆದ ಶ್ವಾನ ಪ್ರದರ್ಶನ

Update: 2019-01-12 11:56 GMT

ಮಡಿಕೇರಿ ಜ.12: ನಿಷ್ಠೆ, ಪ್ರಾಮಾಣಿಕತೆಗಳಿಗೆ ಮತ್ತೊಂದು ಹೆಸರಾಗಿರುವ ‘ಶ್ವಾನ’ಗಳು, ಸಾಕು ಪ್ರಾಣಿಯಾಗಿ ಮನೆಮಂದಿಗೆ ಪ್ರೀತಿಪಾತ್ರವಾಗಿ, ಕುಟುಂಬದ ಸದಸ್ಯನೇ ಆಗಿ ಹೋಗುತ್ತವೆ. ಇಂತಹ ಸಾಕು ನಾಯಿಗಳು ಕೊಡಗು ಪ್ರವಾಸಿ ಉತ್ಸವದ ಶ್ವಾನ ಪ್ರದರ್ಶನದಲ್ಲಿ ತಮ್ಮ ವೈವಿಧ್ಯತೆಗಳಿಂದ ಅಚ್ಚರಿ ಮೂಡಿಸಿದವು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖಾ ವತಿಯಿಂದ ಕೊಡಗು ಪ್ರವಾಸಿ ಉತ್ಸವದ ದ್ವಿತೀಯ ದಿನದಂದು ನಗರದ ಗಾಂಧಿ ಮೈದಾನದಲ್ಲಿ ಆಯೋಜಿತ ಶ್ವಾನ ಪ್ರದರ್ಶನದಲ್ಲಿ 27 ತಳಿಯ ಸುಮಾರು 144 ಶ್ವಾನಗಳು ಪ್ರದರ್ಶಶಿಸಲ್ಪಡುವ ಮೂಲಕ ಪ್ರಾಣಿ ಪ್ರಿಯರನ್ನು ಬಹುವಾಗಿ ಆಕರ್ಷಿಸಿತು.

ಅಪರೂಪದ ಸೈಬೀರಿಯನ್ ಹಸ್ಕಿ, ಬೀಗಲ್, ಮಿನಿಯೇಚರ್ ಪಿನ್ಸರ್, ಪೊಮೇರಿಯನ್, ಲ್ಯಾಬ್ರಡಾರ್, ರಿಟ್ರೈವರ್, ಗೋಲ್ಡನ್ ರಿಟ್ರೈವರ್, ಜರ್ಮನ್ ಶೆಫರ್ಡ್, ಕ್ರಾಸ್ ಬ್ರೀಡ್ಸ್, ರಾಟ್ ವೀಲರ್ಸ್, ಡೊಬರ್ ಮನ್, ಡಾಶ್ ಹೌಂಡ್, ಬಾಕ್ಸರ್, ಡಾಲ್ ಮೆಶಿಯನ್, ಲಾಸಾ ಅಪ್ಸೊ, ಗ್ರೇಟ್‍ಡೇನ್, ಸ್ಟೆಂಟ್ ಬರ್ನಾರ್ಡ್, ಪಗ್, ಕಾಕರ್ ಸ್ಪಾನಿಯಯಲ್, ಸೈಂಟ್ ಬಾರ್ನಡ್, ಚೊ ಚೊ, ಪ್ರೆಂಚ್ ಮ್ಯಾಸ್ಟಿಫ್ ಜೊತೆಗೆ ಭಾರತೀಯ ತಳಿಗಳಾದ ಮುಧೋಳ ಮತ್ತು ಬುಲ್ಲಿಕುತ್ತ ಮೊದಲಾದ ತಳಿಗಳ ಶ್ವಾನಗಳ ಪ್ರದರ್ಶನ ವಿಶೇಷವಾಗಿತ್ತು.  

ಶ್ವಾನ ಪ್ರದರ್ಶನಕ್ಕೆ ಪಶುಪಾಲನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಡಾ.ಕನ್ನಂಡ ಅಯ್ಯಪ್ಪ ಅವರು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಶ್ವಾನ ಪ್ರದರ್ಶನಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಶ್ವಾನಗಳನ್ನು ತಂದು ಪ್ರದರ್ಶಿಸಿರುವುದು ವಿಶೇಷವಾಗಿದೆ ಎಂದರು. 

ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳಿಗೆ ಉಚಿತವಾಗಿ ರೇಬೀಸ್ ರೋಗ ನಿರೋಧಕ ಲಸಿಕೆ ಹಾಕಲಾಯಿತು. ಪೊಲೀಸ್ ಇಲಾಖೆಯ ಶ್ವಾನದಳ ವಿಭಾಗದಿಂದ ಅಪರಾಧ ಪತ್ತೆ ಹಚ್ಚುವಿಕೆ ಪ್ರಾತ್ಯಕ್ಷಿಕೆ ನಡೆಯಿತು.   

ಬಹುಮಾನ-ಗೋಣಿಕೊಪ್ಪದ ಗೌರವ್ ಕಾರ್ಯಪ್ಪ ಅವರ ಜರ್ಮನ್ ಶೆಫರ್ಡ್, ಕಿರುಂದಾಡು ಗ್ರಾಮದ ಪ್ರಮೀಳಾ ಪಳಂಗಪ್ಪ ಅವರ ಮುಧೋಳ, ಮೈಸೂರು ಜೋಯಲ್ ಅವರ ಬೀಗಲ್, ವೀರಾಜಪೇಟೆಯ ನವೀನ್ ಅವರ ರಾಟ್‍ವೀಲರ್ ಮತ್ತು ಕಿರಗೂರು ಗ್ರಾಮದ ರಾಕೇಶ್ ಅವರ ಮಿನಿಯೇಚರ್ ಪಿನ್ಸರ್ ಶ್ವಾನಗಳಿಗೆ ಬಹುಮಾನ ದೊರೆಯಿತು.  

ಕೆ.ಲಕ್ಷ್ಮಿಪ್ರಿಯ ಅವರು ಶ್ವಾನ ಪ್ರದರ್ಶನ ವೀಕ್ಷಿಸಿದರು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಎ.ಬಿ.ತಮ್ಮಯ್ಯ, ಪಶುಪಾಲನಾ ಇಲಾಖೆಯ ತಾಲೂಕು ಪಶುವೈದ್ಯರಾದ ಡಾ.ಪಿ.ಬೊಳ್ಕ(ಮಡಿಕೇರಿ), ನಾಗರಾಜು (ಸೋಮವಾರಪೇಟೆ) ಮತ್ತಿತರರು ಇದ್ದರು. ತೀರ್ಪುಗಾರರಾಗಿ ಡಾ.ಅಮರನಾಥ್, ಡಾ.ಹೇಮಂತ್, ಡಾ.ರಮೇಶ್, ಡಾ.ನಿತೀನ್ ಪ್ರಭು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News